ಪುತ್ತೂರು: ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ಪಕ್ಷ ವಿರೋಧ ಚಟುವಟಿಕೆ ನಡೆಸಿದ ಆರೋಪದ ಮೇಲೆ ತಾಪಂ ಮಾಜಿ ಸದಸ್ಯೆ ಉಷಾ ಅಂಚನ್ ಅವರ ಉಚ್ಛಾಟಿತ ಮಾಡಿರುವ ಆದೇಶವನ್ನು ರದ್ದುಗೊಳಿಸುವಂತೆ ನೆಲ್ಯಾಡಿ ಕಾಂಗ್ರೆಸ್ ಗ್ರಾಮ ಸಮಿತಿ ವತಿಯಿಂದ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಪತ್ರ ಬರೆಯಲಾಗಿದೆ.
ಕಳೆದ 15 ವರ್ಷಗಳಿಂದ ಉಷಾ ಅಂಚನ್ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯ ಕಾರ್ಯಕರ್ತೆಯಾಗಿದ್ದು, ಮೂರು ಬಾರಿ ತಾಪಂ ಸ್ಪರ್ಧೆ ಮಾಡಿದ್ದರು. ಸದಸ್ಯೆಯಾಗಿ 10 ವರ್ಷ ಸೇವೆ ಸಲ್ಲಿಸಿದ್ದರು.
ಗ್ರಾಪಂ, ಜಿಪಂನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವಲ್ಲಿ ಅವರ ಪಾತ್ರ ಮಹತ್ತರವಾಗಿದೆ. ಅವರು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆಯಾಗಿ ಏಳು ವರ್ಷ ಸೇವೆ ಸಲ್ಲಿಸಿದ್ದರು. ಅವರ ಅವಧಿಯಲ್ಲಿ ಅನೇಕ ಮೆಡಿಕಲ್ ಕ್ಯಾಂಪ್ ಸೇರಿದಂತೆ ಹಲವು ಚಟುವಟಿಕೆಗಳು ನಡೆದಿವೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಯಾವುದೇ ಕಷ್ಟದ ಸಂದರ್ಭದಲ್ಲಿ ಅವರ ನೋವಿಗೆ ಸ್ಪಂದನೆ ನೀಡುತ್ತಿದ್ದರು. ಆದ್ದರಿಂದ ಉಷಾ ಅಂಚನ್ ರವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದಲ್ಲಿ ಪಕ್ಷಕ್ಕೆ ತೊಂದರೆ. ಆದ್ದರಿಂದ ಉಚ್ಛಾಟನೆ ಆದೇಶವನ್ನು ರದ್ದುಗೊಳಿಸಿ ಅವರಿಗೆ ನ್ಯಾಯ ಕೊಡಬೇಕೆಂದು ಡಿಸಿಸಿ ಅಧ್ಯಕ್ಷರಿಗೆ ಸಲ್ಲಿಸಿರುವ ಮನವಿಯಲ್ಲಿ ವಿನಂತಿಸಲಾಗಿದೆ.