ಪುತ್ತೂರು: ಪ್ರಸ್ತುತ ಡ್ರಗ್ಸ್ ಸೇವನೆಯಿಂದ ಶೇಕಡಾ 70ರಷ್ಟು ಜನ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇತ್ತೀಚಿನ ಯುವಜನಾಂಗ ಈ ವಿಚಾರವಾಗಿ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಪುತ್ತೂರು ಘಟಕದ ಡಿವೈಎಸ್ಪಿ ಗಾನ ಪಿ ಕುಮಾರ್ ಹೇಳಿದರು.
ಅವರು ಪೊಲೀಸ್ ಇಲಾಖೆ, ಎನ್.ಸಿ.ಸಿ, ಎನ್.ಎಸ್.ಎಸ್ ಹಾಗೂ ಐಕ್ಯುಎಸಿ ಜಂಟಿ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಣೆ ವಿರುದ್ಧ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ನಾವು ತೆಗೆದುಕೊಳ್ಳುವ ಮಾತ್ರೆ, ವಿಕ್ಸ್, ಜ್ಯೂಸ್ ಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇರುತ್ತದೆ. ಆದಷ್ಟು ಇವುಗಳನ್ನು ಜಾಗರೂಕತೆಯಿಂದ ಬಳಸಬೇಕು. ಒಮ್ಮೆ ಡ್ರಗ್ಸ್ ಗೆ ದಾಸರಾದ ಮೇಲೆ ಅದರಿಂದ ಹೊರ ಬರುವ ಮಾರ್ಗ ಅತ್ಯಂತ ಕಠಿಣ. ಡ್ರಗ್ಸ್ ಅಪಾಯಕಾರಿಯಾಗಲು ಹಲವಾರು ವೈಜ್ಞಾನಿಕ ಕಾರಣಗಳಿವೆ. ಯಾರಾದರೂ ತಪ್ಪು ದಾರಿ ತುಳಿಯುತ್ತಿದ್ದಾರೆ ಎಂದು ತಿಳಿದಾಕ್ಷಣ ಅದನ್ನ ಅಧ್ಯಾಪಕರಿಗೆ ಅಥವಾ ಪೊಲೀಸರಿಗೆ ತಿಳಿಸಬೇಕು ಎಂದು ಹೇಳಿದರು.
ಎಸ್ಐ ಶ್ರೀಕಾಂತ ಮಾತನಾಡಿ, ಇದೊಂದು ಜಾಗೃತಿ ಕಾರ್ಯಕ್ರಮವಾಗಿದ್ದು, ಜಗತ್ತಿನ ಮೂಲೆ ಮೂಲೆಗಳಲ್ಲಿ ಆಚರಿಸಲಾಗುತ್ತಿದೆ. ಸಮಾಜದಲ್ಲಿನ ಕುರುಹುಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಹಾಗೆಯೇ ಡ್ರಗ್ಸ್ ಕೂಡಾ ಒಂದು ಸಾಮಾಜಿಕ ಕುರುಹು. ವಿದ್ಯಾರ್ಥಿಗಳು ಇದರಿಂದ ದೂರವಿರಬೇಕು. ಡ್ರಗ್ಸ್ ತೆಗೆದುಕೊಳ್ಳುವುದು ಮಾತ್ರ ಅಪರಾಧವಲ್ಲದೆ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಡ್ರಗ್ಸ್ ನಿಂದ ದೂರವಿರೋಣ ಸ್ವಸ್ಥ ಸಮಾಜವನ್ನು ನಿರ್ಮಿಸೋಣ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥ ಮತ್ತು ವಿಶೇಷ ಅಧಿಕಾರಿ ಡಾ. ಶ್ರೀಧರ್ ನಾಯಕ್, ಪುತ್ತೂರು ಘಟಕದ ಬಿಟಿ ಪೊಲೀಸ್ ಸುರೇಶ್ ಉಪಸ್ಥಿತರಿದ್ದರು. ಲೆಫ್ಟಿನೆಂಟ್ ಭಾಮಿ ಅತುಲ್ ಶೆಣೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.