ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ನಡೆಯಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಮುಂದಿನ ನಡೆಯ ಕುರಿತು ಸಭೆ ಭಾನುವಾರ ದೇವಸ್ಥಾನದ ಕಚೇರಿಯಲ್ಲಿ ನಡೆಯಿತು.
ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದೇವಸ್ಥಾನದ ಅಭಿವೃದ್ಧಿ ಯೋಜನೆಗಳಾದ ದೇವಸ್ಥಾನದ ಎದುರಿನ ರಥಬೀದಿ ಕೊನೆಯಲ್ಲಿ ಮಹಾದ್ವಾರ ಧಾರ್ಮಿಕ ಶಿಕ್ಷಣ ಕೇಂದ್ರ, ವೇದಪಾಠ ಶಾಲೆ ಕಟ್ಟಡ, ಯಾತ್ರಿ ನಿವಾಸ್, ರಥ ಮಂದಿರ ಹೀಗೆ ಸುಮಾರು 45 ಪ್ರಾಜೆಕ್ಟ್ ನ ನೀಲ ನಕಾಶೆಯ ತ್ರೀಡಿ ವೀಡಿಯೋವನ್ನು ಪ್ರೊಜೆಕ್ಟರ್ ಮೂಲಕ ತೋರಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ದೇವಸ್ಥಾನದ ಪ್ರತಿಯೊಂದು ಅಭಿವೃದ್ಧಿ ಕಾರ್ಯ ಮಾಸ್ಟರ್ ಪ್ಲಾನ್ ಮೂಲಕವೇ ನಡೆಯಬೇಕು. ಈಗಾಗಲೇ ದೇವಸ್ಥಾನದ ಅಭಿವೃದ್ಧಿ ಕುರಿತು 50 ಕೋಟಿಯ ಮಾಸ್ಟರ್ ಪ್ಲಾನ್ ಮಾಡಲಾಗಿದೆ. ಇದು ಇಲ್ಲಿಯೇ ಇದೆ. ಇನ್ನೂ ಅಪ್ರೂವಲ್ ಗಾಗಿ ಸರಕಾರೆದ ಮಟ್ಟಕ್ಕೆ ಹೋಗಿಲ್ಲ. ಈ ನಿಟ್ಟಿನಲ್ಲಿ ಸರಕಾರದ ಹಂತಕ್ಕೆ ತಲುಪಿಸಿ ಆದ್ಯತೆಯ ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಸರಕಾರದ ದೈವ ಸಂಕಲ್ಪಂ ಯೋಜನೆಯಡಿ ಸುಮಾರು 25 ದೇವಸ್ಥಾನಗಳು ಆಯ್ಕೆಯಾಗಿವೆ. ಅದರಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಒಂದಾಗಿದೆ. ಈಗಾಗಲೇ ಖ್ಯಾತ ಸಂಸ್ಥೆಯೊಂದರ ಮೂಲಕ ಮಾಸ್ಟರ್ ಪ್ಲಾನ್ ಮಾಡಲಾಗಿದ್ದು, ಇದನ್ನು ಸರಕಾರಕ್ಕೆ ಮುಟ್ಟಿಸಲು ಶಾಸಕರ ಮೂಲಕವೇ ಆಗಬೇಕು. ಈ ನಿಟ್ಟಿನಲ್ಲಿ ಈ ಸಭೆಯನ್ನು ಕರೆಯಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಐತ್ತಪ್ಪ ನಾಯ್ಕ್, ರಾಮದಾಸ ಗೌಡ, ರವೀಂದ್ರನಾಥ ರೈ ಬಳ್ಳಮಜಲು, ರಾಮಚಂದ್ರ ಕಾಮತ್, ಶೇಖರ್ ನಾರಾವಿ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.