ಪುತ್ತೂರು: ಕೆಲಸಕ್ಕೆ ಮುಂದಾಗುವಾಗ ಸವಾಲುಗಳು ಸಾಮಾನ್ಯ. ಹಾಗೆಂದು ಆ ಸವಾಲನ್ನು ಎದುರಿಸದೇ ಇದ್ದರೆ, ಯಶಸ್ಸು ಸಿಕ್ಕಲು ಸಾಧ್ಯವೇ ಇಲ್ಲ. ಆದ್ದರಿಂದ ಒಂದು ಹೆಜ್ಜೆ ಮುಂದಕ್ಕೆ ಇಡಿ. ಸವಾಲುಗಳನ್ನು ಎದುರಿಸಿ, ತಾಳ್ಮೆ, ಪರಿಶ್ರಮದಿಂದ ಕೆಲಸವನ್ನು ಸಾಧಿಸಿಕೊಳ್ಳು. ಯಶಸ್ಸು, ಕೀರ್ತಿ ನಿಮ್ಮ ಬಳಿಗೆ ಬರುತ್ತದೆ ಎಂದು ಪುತ್ತೂರು ರೋಟರಿ ಕ್ಲಬ್ಬಿನ ಯುವಜನ ಸೇವಾ ನಿರ್ದೇಶಕ ಪ್ರೇಮಾನಂದ್ ಹೇಳಿದರು.
ನೆಹರುನಗರ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪುತ್ತೂರು ರೋಟರ್ಯಾಕ್ಟ್ ಕ್ಲಬ್ ವತಿಯಿಂದ ನಡೆದ ವಾರ್ಷಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ – ಕಾಲೇಜುಗಳಲ್ಲಿ, ಸಂಘ – ಸಂಸ್ಥೆಗಳಲ್ಲಿ ಮಾಹಿತಿಯನ್ನು ನೀಡುವುದರಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಇಂತಹ ಬದಲಾವಣೆ ನಮ್ಮಿಂದಲೇ ಸಾಧ್ಯವಾಗಲಿ ಎಂದು ಮುಂದಡಿ ಇಟ್ಟಿರುವ ಪುತ್ತೂರು ರೋಟರ್ಯಾಕ್ಟ್ ಕ್ಲಬ್ಬಿನ ಕಾರ್ಯ ಶ್ಲಾಘನೀಯ ಎಂದರು.
ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಸಭಾಪತಿ ಶ್ರೀಧರ್ ಕೆ. ಮಾತನಾಡಿ, ಪುತ್ತೂರು ರೋಟರ್ಯಾಕ್ಟ್ ಕ್ಲಬ್ ನೇತೃತ್ವದಲ್ಲಿ ಈ ವರ್ಷದಲ್ಲಿ ಮನಸ್ಸಿನ ಆರೋಗ್ಯ, ಸೈಬರ್ ಕ್ರೈಮ್ ಹಾಗೂ ಮಧುಮೇಹ ಉಚಿತ ತಪಾಸಣಾ ಶಿಬಿರ, ಥೈರಾಯ್ಡ್ ಗ್ರಂಥಿಯ ಉಚಿತ ತಪಾಸಣೆಯನ್ನು ಪ್ರತಿ ತಿಂಗಳು ಹಮ್ಮಿಕೊಳ್ಳಲಾಗಿದೆ. ಸಂಪನ್ಮೂಲ ವ್ಯಕ್ತಿಗಳಾದ ನಾಗಶ್ರೀ ಐತಾಳ್ ಹಾಗೂ ಪ್ರಣೀತಾ ಅವರು ಸಂಪನ್ಮೂಲ ವ್ಯಕ್ತಿಯಾಗಿ ಸಹಕರಿಸಿದ್ದು, ವಾರ್ಷಿಕ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಿದ್ದಾರೆ. ಡಾ. ನಝೀರ್ ಅಹಮದ್ ಹಾಗೂ ಡಾ. ಶ್ರೀಪತಿ ರಾವ್ ಅವರ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ ಎಂದರು
ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ಗಣೇಶ್ ಎನ್. ಕಲ್ಲರ್ಪೆ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಸೈಬರ್ ಕ್ರೈಮ್ ವಿಷಯದ ಸಂಪನ್ಮೂಲ ವ್ಯಕ್ತಿ ಪ್ರಣೀತಾ ಅವರನ್ನು ಸನ್ಮಾನಿಸಲಾಯಿತು. ಮನಸ್ಸಿನ ಆರೋಗ್ಯ ವಿಷಯದ ಸಂಪನ್ಮೂಲ ವ್ಯಕ್ತಿ ನಾಗಶ್ರೀ ಐತಾಳ್, ಥೈರಾಯ್ಡ್ ಗ್ರಂಥಿಯ ಉಚಿತ ತಪಾಸಣಾ ಶಿಬಿರ ನಡೆಸಿಕೊಟ್ಟ ಡಾ. ನಝೀರ್ ಅಹಮದ್, ಮಧುಮೇಹ ಉಚಿತ ತಪಾಸಣಾ ಶಿಬಿರ ನಡೆಸಿಕೊಟ್ಟ ಡಾ. ಶ್ರೀಪತಿ ರಾವ್ ಅವರನ್ನು ಗೌರವಿಸಲಾಯಿತು.
ವಾರ್ಷಿಕ ಕಾರ್ಯಕ್ರಮಗಳ ಪ್ರಾಯೋಜಕರಾಗಿ ಸಹಕರಿಸಿದ ಜಿ.ಎಲ್. ಆಚಾರ್ಯ ಹಾಗೂ ಮುಳಿಯ ಜ್ಯುವೆಲ್ಲರ್ಸ್ ಅವರನ್ನು ಗುರುತಿಸಲಾಯಿತು. ವಿದ್ಯಾರ್ಥಿ ಜೀವನ್ ಪ್ರಾರ್ಥಿಸಿದರು. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕ ಆ್ಯಶ್ಲೇ ಡಿಸೋಜಾ ವಂದಿಸಿದರು. ಪುತ್ತೂರು ರೋಟರ್ಯಾಕ್ಟ್ ಕ್ಲಬ್ಬಿನ ಸಮುದಾಯ ಸೇವಾ ನಿರ್ದೇಶಕ ಶಶಿಧರ್ ಕೆ. ಮಾವಿನಕಟ್ಟೆ ಕಾರ್ಯಕ್ರಮ ನಿರೂಪಿಸಿ, ಅಂತಾರಾಷ್ಟ್ರೀಯ ಸೇವಾ ನಿರ್ದೇಶಕ ನವೀನ್ ಚಂದ್ರ ಸಹಕರಿಸಿದರು.
ಕಾರ್ಯಕ್ರಮದ ಬಳಿಕ ಪ್ರಣೀತಾ ಅವರು ಸೈಬರ್ ಕ್ರೈಮ್ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು.