ಪುತ್ತೂರು: ತಾಲೂಕಿನ ನೆಲ್ಯಾಡಿ ಸಮೀಪದ ಕೆಲವು ಪ್ರದೇಶದಲ್ಲಿ ಡೆಂಗ್ಯೂ ಜ್ವರ ಬಾಧಿಸಿ ಹಲವರು ಆಸ್ಪತ್ರೆಗೆ ದಾಖಲಾದ ಮಾಹಿತಿ ಬೆಳಕಿಗೆ ಬಂದಿದೆ.
ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಶಂಕಿತ ಡೆಂಗ್ಯೂ ಬಾಧಿತ ಇಬ್ಬರು ದಾಖಲಾಗಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಜ್ವರ ಪೀಡಿತ ಪ್ರದೇಶಗಳ ಮನೆಗಳಿಗೆ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿ ಜ್ವರ ಪೀಡಿತರ ಚಿಕಿತ್ಸೆಗೆ ಮಾರ್ಗದರ್ಶನ ನೀಡುವ ಮೂಲಕ ಜ್ವರದ ನಿಯಂತ್ರಣಕ್ಕೆ ಮುಂದಾಗಿದ್ದಾರೆ.
ಪುತ್ತೂರು ಪೇಟೆಯಲ್ಲಿ ಡೆಂಗ್ಯೂ ರೋಗ ಲಕ್ಷಣ ಕಂಡು ಬಂದಿಲ್ಲ. ಕುದ್ಮಾರಿನ 13 ವರ್ಷದ ಬಾಲಕಿಯೊಬ್ಬರು ಶಂಕಿತ ಡೆಂಗ್ಯೂ ಬಾಧಿತರಾಗಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇ ರೀತಿ ನೆಲ್ಯಾಡಿಯಲ್ಲೂ ಶಂಕಿತ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ
ಸೋಂಕು ಹೊಂದಿದ ಈಡಿಸ್ ಈಜಿಪ್ಟ್ ಸೊಳ್ಳೆಗಳಿಂದಾಗಿ ಡೆಂಗ್ಯೂ ಹರಡುತ್ತದೆ. ಮುಖ್ಯವಾಗಿ ಈ ಸೊಳ್ಳೆಗಳು ಮುಸ್ಸಂಜೆ ಮತ್ತು ಮುಂಜಾನೆಯ ವೇಳೆ ಕಚ್ಚುತ್ತವೆ. ಡೆಂಗ್ಯೂ ಜ್ವರದಿಂದ ತೊಂದರೆಗೊಳಗಾದವರು ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು. ಹಗಲು ಹೊತ್ತಿನಲ್ಲಿ ಮನೆಯಲ್ಲಿ ವಿಶ್ರಾಂತಿ ಪಡೆಯುವ ಮಕ್ಕಳು, ಗರ್ಭಿಣಿಯರು, ಬಾಣಂತಿ ಹಾಗೂ ವಯಸ್ಸಾದವರು ಕೂಡ ಸೊಳ್ಳೆ ಪರದೆ ಉಪಯೋಗಿಸಬೇಕು. ಮನೆಯ ಪರಿಸರದಲ್ಲಿ ಸ್ವಚ್ಛತೆ, ಘನತ್ಯಾಜ್ಯ ಸಮರ್ಪಕ ವಿಲೇವಾರಿ, ನೀರು ಸಂಗ್ರಹಿಸುವಾಗ ಭದ್ರವಾದ ಮುಚ್ಚಳ ಅಳವಡಿಸುವುದು, ನೀರು ನಿಂತ ಸ್ಥಳಗಳಿಗೆ ವಾರದಲ್ಲಿ 1 ಸಲ ಟೆಮೋಫಾಸ್ ರಾಸಾಯನಿಕ ಸಿಂಪಡಣೆ ಮಾಡುವುದು ಇತ್ಯಾದಿ ಕ್ರಮ ಕೈಗೊಂಡಾಗ ಸೊಳ್ಳೆಗಳ ಬೆಳವಣಿಗೆಯನ್ನು ನಿಯಂತ್ರಿಸಬಹುದು