ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ಬೆಳ್ಳಿ ಹಬ್ಬ ಸಭಾಭವನದಲ್ಲಿ ಸಂತ ಫಿಲೋಮಿನಾ ಪ್ರೌಢಶಾಲೆ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ಸಂತ ಫಿಲೋಮಿನಾ ಕಾಲೇಜಿನ ಎನ್ ಸಿ ಸಿ ಮತ್ತು ಎನ್ ಎಸ್ ಎಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲವಂ| ಡಾ| ಆಂಟೊನಿ ಪ್ರಕಾಶ್ ಮೊಂತೆರೊ ಮಾತನಾಡಿ, “ಯೋಗವು ಪ್ರಪಂಚಕ್ಕೆ ಭಾರತದ ಕೊಡುಗೆಯಾಗಿದೆ. ಇಂದು ಗಡಿ, ಸಂಸ್ಕೃತಿಯನ್ನು ಮೀರಿ ವಿಶ್ವದಾದ್ಯಂತ ಕೋಟ್ಯಂತರ ಜನರು ಯೋಗಾಭ್ಯಾಸ ನಡೆಸುತ್ತಿದ್ದಾರೆ. ಯೋಗದಿಂದ ನಮ್ಮ ದೇಹ ಹಾಗೂ ಮನಸ್ಸುಗಳ ಮೇಲೆ ನಿಯಂತ್ರಣವನ್ನು ಸಾಧಿಸಬಹುದು. ಯೋಗವು ನಮ್ಮ ಧಾವಂತದ ಬದುಕಿಗೆ ಕಡಿವಾಣವನ್ನು ಹಾಕುತ್ತದೆ. ಯೋಗವನ್ನು ಸಾಮೂಹಿಕವಾಗಿ ಅಭ್ಯಾಸ ಮಾಡುವ ಮೂಲಕ ಸಾಮರಸ್ಯದ ಸಂದೇಶವನ್ನು ಸಾರೋಣ. ಸಮಗ್ರ ಆರೋಗ್ಯ, ಆಂತರಿಕ ಸಮತೋಲನ ಹೊಂದಿರುವ ಸುಂದರ ಸುದೃಢ ಸಮಾಜ ನಿರ್ಮಾಣ ಮಾಡೋಣ” ಎಂದು ಹೇಳಿದರು.
ಅತಿಥಿಯಾಗಿ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ| ಸ್ಟ್ಯಾನಿ ಪಿಂಟೋ ಸಂತ ಫಿಲೋಮಿನಾ ಪ್ರೌಢಶಾಲಾ ಮುಖ್ಯ ಶಿಕ್ಷಕಿ ವಂ| ಮಾಕ್ಸಿಮ್ ಡಿಸೋಜ ಭಾಗವಹಿಸಿದರು. ಎನ್ ಸಿ ಸಿ ಆಫೀಸರ್ ಲೆಫ್ಟಿನೆಂಟ್ ಜೋನ್ಸನ್ ಡೇವಿಡ್ ಸಿಕ್ವೆರಾ ಸ್ವಾಗತಿಸಿದರು. ಎನ್ ಎಸ್ ಎಸ್ ಸ್ಯಯಂಸೇವಕ ಜೈನುದ್ದೀನ್ ವಂದಿಸಿದರು. ನೌಕಾದಳದ ಅಧಿಕಾರಿ ತೇಜಸ್ವಿ ಭಟ್ ಕಾರ್ಯಕ್ರಮ ನಿರೂಪಿಸಿದರು. ಎನ್ ಎಸ್ ಎಸ್ ಅಧಿಕಾರಿ ಪುಷ್ಪಾ ಎನ್ ಉಪಸ್ಥಿತರಿದ್ದರು.