ಪುತ್ತೂರು: ಕರ್ನಾಟಕ ಛೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಜೂ.22 ರಂದು ಕರೆ ನೀಡಿದ ಕರ್ನಾಟಕ ಬಂದ್ ಗೆ ನಮ್ಮ ಬೆಂಬಲವಿಲ್ಲ ಎಂದು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ತಿಳಿಸಿದೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಅಧ್ಯಕ್ಷ ಜಾನ್ ಕುಟಿನ್ಹ ಮಾತನಾಡಿ, ವಿದ್ಯುತ್ ದರ ಏರಿಕೆಯಾಗಿರುವುದಕ್ಕೆ ನಮ್ಮ ವಿರೋಧವಿದೆ. ಒಂದೆಡೆ ಉಚಿತ ಇನ್ನೊಂದೆಡೆ ದರ ಏರಿಕೆ ಮಾಡಿರುವುದು ಸರಿಯಲ್ಲ. ಆದರೆ ಬಂದ್ ಮಾಡುವುದರಿಂದ ಕೈಗಾರಿಕೋದ್ಯಮಿಗಳಿಗೆ ಹಾಗೂ ವರ್ತಕರಿಗೇ ನಷ್ಟ. ಈ ನಿಟ್ಟಿನಲ್ಲಿ ಮಂಗಳೂರು ಛೇಂಬರ್ಸ್ ಆಫ್ ಕಾಮರ್ಸ್ & ಇಂಸ್ಟ್ರೀಸ್ ಸಲಹೆಯಂತೆ ಬಂದ್ ಗೆ ನಾವು ಬೆಂಬಲ ನೀಡುವುದಿಲ್ಲ ಎಂದು ತಿಳಿಸಿದರು.
ದರ ಏರಿಕೆ ಕುರಿತು ಮುಂದೆ ನಾವು ಪುತ್ತೂರು ಸಹಾಯಕ ಆಯುಕ್ತರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ. ಅಲ್ಲದೆ ಸರಕಾರದ ಗಮನ ಸೆಳೆಯುವಂತೆ ಶಾಸಕರಿಗೂ ಮನವಿ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.
ಈಗಾಗಲೇ ವಾರದಲ್ಲಿ ಒಂದು ದಿನ ಪವರ್ ಕಟ್ ನಿಗದಿಯಾಗಿದೆ. ಆದರೆ ವಾರದ ಇತರ ದಿನಗಳಲ್ಲಿ ಕರೆಂಟ್ ತೆಗೆಯುತ್ತಾರೆ. ಇದರಿಂದ ಸಣ್ಣ ಕೈಗಾರಿಕೋದ್ಯಮಿಗಳಿಗೆ ತೊಂದರೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಇದನ್ನು ಸರಿಪಡಿಸುವಂತೆ ನಮ್ಮ ಸಂಘಕ್ಕೆ ಮನವಿ ಬಂದಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಪಿ.ಉಲ್ಲಾಸ ಪೈ, ಉಪಾಧ್ಯಕ್ಷ ವಾಮನ್ ಪೈ, ಶ್ರೀರಾಮ ಕೊಳತ್ತಾಯ, ಮಾಜಿ ಅಧ್ಯಕ್ಷ ಕೇಶವ ಪೈ ಉಪಸ್ಥಿತರಿದ್ದರು.