ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ ಕಾರ್ಯಕ್ರಮ

ಪುತ್ತೂರು: ಸಾಂಸ್ಕೃತಿಕ ಕಲೆಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಿದ್ದು ಭಾರತೀಯ ಮನಸ್ಸಿನ ಬೆಳವಣಿಗೆಗೆ ಪೂರಕವಾಗಿದೆ. ಇವುಗಳು ಮನಸ್ಸಿಗೆ ಮನೋರಂಜನೆ ಒದಗಿಸುವುದು ಮಾತ್ರವಲ್ಲದೆ ವ್ಯಕ್ತಿಯನ್ನು ಸಂವೇದನಶೀಲರನ್ನಾಗಿಸುತ್ತದೆ. ಎಂದು ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಭಟ್ ಹೇಳಿದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ-2023 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ನಾಲ್ಕು ಗೋಡೆಯ ಶಿಕ್ಷಣ ಪ್ರಸ್ತುತ ಕಾಲಘಟ್ಟದಲ್ಲಿ ಸಾಕಾಗುವುದಿಲ್ಲ. ಜ್ಞಾನ ಹೆಚ್ಚಿಸಿಕೊಳ್ಳಬೇಕಾದರೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಓದುವುದರ ಜೊತೆಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆ ಅತ್ಯಗತ್ಯ. ಭಾರತೀಯ ಕಲೆಗಳು ಸಂಸ್ಕೃತಿಯನ್ನು ಬೆಳೆಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುತ್ತಿದೆ ಸಂಗೀತವು ಹೃದಯಕ್ಕೆ ಆನಂದವನ್ನೂ ಬುದ್ಧಿಗೆ ಜ್ಞಾನವನ್ನೂ ನೀಡುತ್ತದೆ. ಬದುಕಿನಲ್ಲಿ ಶಿಸ್ತನ್ನು ರೂಪಿಸುತ್ತದೆ ಎಂದರು.































 
 

ಜೆಸಿಐನ ರಾಷ್ಟ್ರೀಯ ತರಬೇತುದಾರ ಕೃಷ್ಣಮೋಹನ್ ಪಿ. ಎಸ್ ಮಾತನಾಡಿ,  ಕಲಿಕೆಯ ಜೊತೆಜೊತೆಗೆ ಲೋಕಜ್ಞಾನವು ಅತ್ಯಗತ್ಯ. ಈ ಮೂಲಕ ವಿದ್ಯಾರ್ಥಿಗಳು ಚುರುಕಾಗಲು ಸಾಧ್ಯವಿದೆ.  ಕಾಲೇಜು ಕೇವಲ ಪಠ್ಯ ಚಟುವಟಿಕೆಗಳಿಗೆ ಸೀಮಿತವಲ್ಲ, ಇಲ್ಲಿ ಬಹಳ ಅವಕಾಶಗಳಿವೆ, ಅದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕು ಎಂದರು.

ಕಾಲೇಜಿನ ಆಡಳಿತ ಮಂಡಳಿ ಸದಸ್ಯೆ ವತ್ಸಲರಾಜ್ಞಿ ಮಾತನಾಡಿ ಉನ್ನತ ಮಟ್ಟಕ್ಕೆ ಏರಲು ಕಾರಣವಾದ ಮೆಟ್ಟಿಲುಗಳ ಸ್ಮರಣೆ ನಮಗೆ ಯಾವತ್ತೂ ಇರಬೇಕು. ಶಿಕ್ಷಣದ ಜೊತೆಗೆ ಸಂಸ್ಕೃತಿ ನೀಡಿದಾಗ ಅದು ಪ್ರತಿಭೆಗೆ ಅವಕಾಶ ನೀಡುತ್ತದೆ. ಬದುಕಿನಲ್ಲಿ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡಾಗ ಜೀವನದ ಪಯಣ ಸುಗಮವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಸತತ ಪ್ರಯತ್ನದಿಂದ ಇಂತಹ ಗುರಿಯನ್ನು ಸಾಧಿಸಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಸುಮಾರು 72 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಗೋಪಾಲಕೃಷ್ಣ ಭಟ್, ಕೋಶಾಧಿಕಾರಿ ಸಚಿನ್ ಶೆಣೈ ಕೆ, ಪ್ರಾಂಶುಪಾಲ ಮಹೇಶ ನಿಟಿಲಾಪುರ ಉಪಸ್ಥಿತರಿದ್ದರು. ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಶ್ರೀಧರ ಶೆಟ್ಟಿಗಾರ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕಿ ಭಾಗ್ಯಶ್ರೀ ವಂದಿಸಿದರು. ಉಪನ್ಯಾಸಕಿ ಮಮತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top