ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಹಾಗೂ ರೋಟರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೂಪರ್ ಸ್ಪೆಷಾಲಿಟಿ ರೋಟರಿ ಕಣ್ಣಿನ ಆಸ್ಪತ್ರೆ ಜೂ.21 ಬುಧವಾರ ರೋಟರಿ ಬ್ಲಡ್ಕ ಬ್ಯಾಂಕ್ ಕಟ್ಟಡದ ತಳ ಅಂತಸ್ತಿನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ರೋಟರಿ ಕ್ಲಬ್ ಕಣ್ಣಿನ ಆಸ್ಪತ್ರೆಯ ಚೆಯರ್ ಮ್ಯಾನ್ ಡಾ.ಭಾಸ್ಕರ ಎಸ್. ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸುಮಾರು ಎರಡೂವರೆ ಸಾವಿರ ಚದರ ಅಡಿ ಜಾಗದಲ್ಲಿ ಆಸ್ಪತ್ರೆ ಕಾರ್ಯಾಚರಿಸಲಿದ್ದು, ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಈಗಾಗಲೇ ಉಡುಪಿ ಪ್ರಸಿದ್ಧ ಕಣ್ಣಿನ ಆಸ್ಪತ್ರೆ ಪ್ರಸಾದ್ ನೇತ್ರಾಲಯ ಅವರೊಂದಿಗೆ ಒಪ್ಪಂದ ಮಾಡಲಾಗಿದೆ ಎಂದು ತಿಳಿಸಿದರು.
ರೋಟರಿ ಸಂಸ್ತೆಯೊಂದಿಗೆ ದಿ ರೋಟರಿ ಫೌಂಡೇಶನ್ ಜರ್ಮನಿಯ ಪಾಸ್ ಪೋರ್ಟ್‍ಕ್ಲಬ್, ಅಮೇರಿಕಾದ ಫ್ಲೋರಿಡಾದ ಟೆಂಪನೋನ್ ಕ್ಲಬ್, ರೋಟರಿ ಜಿಲ್ಲೆ 3180, 3150, ರೋಟರಿ ಕ್ಲಬ್ ಪುತ್ತೂರು ಸಿಟಿ, ಇನ್ನರ್ ವೀಲ್ ಕ್ಲಬ್ ಪಾಲುದಾರರಾಗಿ ಸೇರಿಕೊಂಡಿದ್ದಾರೆ. ಈ ಕಣ್ಣಿನ ಆಸ್ಪತ್ರೆ ಅತ್ಯಾಧುನಿಕ ಮೋಡ್ಯುಲರ್ ಒ.ಟಿ ಯನ್ನು ಹೊಂದಿದ್ದು, ಎಲ್ಲಾ ರೀತಿಯ ಆಧುನಿಕ ಮತ್ತು ಸುಸಜ್ಜಿತ ಸೌಲಭ್ಯಗಳನ್ನು ಹೊಂದಿದ್ದು, ರೋಟರುಇ ಕ್ಲಬ್‍ಗಳು ನಡೆಸುವ ಕಣ್ಣಿನ ಶಿಬಿರದಲ್ಲಿ ಪಾಲ್ಗೊಂಡವರಿಗೆ ಉಚಿತವಾಗಿ ತಪಾಸಣೆ, ಚಿಕಿತ್ಸೆಗಳನ್ನು ನಡೆಸಲಾಗುವುದು. ಅಪೇಕ್ಷೆ ಪಟ್ಟ ರೋಗಿಗಳಿಗೆ ಪಾವತಿ ಆಧಾರಿತ ಸೇವೆಗಳನ್ನೂ ಒದಗಿಸಲಾಗುವುದು. ಮುಂದಿನ ಒಂದೂವರೆ ತಿಂಗಳಲ್ಲಿ ಆಸ್ಪತ್ರೆ ಸೇವೆಗೆ ಲಭ್ಯವಾಗಲಿದೆ ಎಂದು ಅವರು ತಿಳಿಸಿದರು.
ಆಸ್ಪತ್ರೆಯ ಉದ್ಘಾಟನೆಯನ್ನು ರೋಟರಿ ಅಂತರಾಷ್ಟ್ರೀಯ ನಿರ್ದೇಶಕ ಮಹೇಶ್ ಕೋಟ್ ಬಾಗಿ ನೆರವೇರಿಸಲಿದ್ದು, ಬಳಿಕ ಮಹಾವೀರ ವೆಂಚುರ್‍ನಲ್ಲಿ ನಡೆಯುವ ಸಮಾರಂಭದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ದೀಪ ಬೆಳಗಿಸಲಿದ್ದಾರೆ. ರೋಟರಿ ಜಿಲ್ಲಾ 3181 ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಮೋಡ್ಯುಲರ್ ಒಟಿಯನ್ನು ಉದ್ಘಾಟಿಸುವರು. ವಿಶ್ವ ರೋಟರಿ ನ್ಯಾಷನಲ್ ರೋಟರ್ಯಾಕ್ಟ್ ಚೆಯರ್ ಮ್ಯಾನ್ ರವಿ ವದೈಮಾಣಿ ಡೇ ಕೇರ್ ಸೆಂಟರನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ರೋಟರಿ ಫೌಂಡೇಶನ್ ಚೆಯರ್ ಮ್ಯಾನ್ ಡಾ.ಕೆ.ಸೂರ್ಯನಾರಾಯಣ, ಪ್ರಸಾದ್ ನೇತ್ರಾಲಯದ ಡಾ.ಕೃಷ್ಣಪ್ರಸಾದ್ ಕೆ., ರೋಟರಿ ಜಿಲ್ಲಾ 3181 ವಲಯದ ಎ.ಜಗಜೀವನ್ ದಾಸ್ ರೈ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ಚೆಯರ್ ಮ್ಯಾನ್ ಉಮಾನಾಥ್ ಪಿ.ಬಿ., ಕಾರ್ಯದರ್ಶಿ ಡಾ.ಶ್ರೀಪ್ರಕಾಶ್, ಪ್ರಸಾದ್ ನೇತ್ರಾಲಯದ ಡಾ. ವಿಕ್ರಂ ಜೈನ್, ಝೇವಿಯರ್ ಡಿ’ಸೋಜಾ ಉಪಸ್ಥಿತರಿದ್ದರು.