ಬೆಂಗಳೂರು: ತಿಂಗಳಿಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಇಂದಿನಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ
ರಾಜ್ಯ ಸರ್ಕಾರವು ಗೃಹಜ್ಯೋತಿಗೆ ನೊಂದಣಿ ಪ್ರಕ್ರಿಯೆಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಒಂದು ಹಂತದಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಗೃಹಜ್ಯೋತಿ ಯೋಜನೆಯನ್ನು ಲೋಕಾರ್ಪಣೆ ಮಾಡಲು ನಿರ್ಧರಿಸಲಾಗಿದೆ.
https://sevasindhugs.karnataka.gov.in/gruhajyothi ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ರಾಜ್ಯದ ಜನತೆ ಉಚಿತ ವಿದ್ಯುತ್ ಸೌಕರ್ಯವನ್ನು ಪಡೆದುಕೊಳ್ಳಬಹುದಾಗಿದೆ. ಗೃಹಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆಗೆ ಸರ್ಕಾರ ಇನ್ನೂ ಕೊನೆಯ ದಿನಾಂಕದ ಗಡುವು ನೀಡಿಲ್ಲ.
ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್, ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ಗಳಲ್ಲಿ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು. ಅಲ್ಲದೇ ಇದರ ಜೊತೆಯಲ್ಲಿ ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರ, ನಾಡಕಚೇರಿ ಹಾಗೂ ಎಲ್ಲಾ ವಿದ್ಯುತ್ ಕಚೇರಿಗಳಲ್ಲಿ ನೋಂದಣಿಗೆ ಅವಕಾಶ ನೀಡಲಾಗಿದೆ.
ಹೇಗಿರುತ್ತೆ ಗೃಹಜ್ಯೋತಿಗೆ ನೋಂದಣಿ ಪ್ರಕ್ರಿಯೆ ..
ಸೇವಾ ಸಿಂಧು ಪೋರ್ಟಲ್ನಲ್ಲಿ ಗೃಹಜ್ಯೋತಿಗೆ ನೋಂದಣಿ ಮಾಡಿಕೊಳ್ಳುವ ಗ್ರಾಹಕರು ವಿದ್ಯುತ್ ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಸಂಖ್ಯೆ ನಮೂದು ಮಾಡಬೇಕು. ಇದಾದ ಬಳಿಕ ನೀವು ಬಾಡಿಗೆ ಮನೆಯಲ್ಲಿ ವಾಸಿಸುವವರೋ ಅಥವಾ ಸ್ವಂತ ಮನೆಯಲ್ಲಿ ವಾಸಿಸುವವರೋ ಎಂಬುದನ್ನು ಆಯ್ಕೆ ಮಾಡಬೇಕು, ಒಂದು ವೇಳೆ ನಿಮ್ಮ ಆಯ್ಕೆ ಬಾಡಿಗೆ ಮನೆ ಎಂದಾದಲ್ಲಿ ಮನೆ ದೃಢೀಕರಿಸುವ ಆಧಾರ್ ಅಥವಾ ಮತದಾರರ ಗುರುತಿನ ಚೀಟಿ ವಿವರಗಳನ್ನು ನೀಡಬೇಕು.
ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದ ಯಾವುದೇ ಗೊಂದಲಗಳನ್ನು ಬಗೆಹರಿಸಿಕೊಳ್ಳಲು ಸರ್ಕಾರವು 24*7 ಸಹಾಯವಾಣಿ ಆರಂಭಿಸಿದೆ. ಗ್ರಾಹಕರು ಯಾವುದೇ ಗೊಂದಲಗಳನ್ನು ಬಗೆಹರಿಸಿಕೊಳ್ಳಲು 1912 ಸಂಖ್ಯೆಯ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ.