ಹಲಸು-ಹಣ್ಣುಗಳ ಮೇಳ-2023 ಸಮಾರೋಪ | ನಿರೀಕ್ಷೆಗೂ ಮೀರಿದ ಜನಸಾಗರ | ಯಶಸ್ವಿಯಾದ ಹಲಸು ಮೇಳ

ಪುತ್ತೂರು:  ನವತೇಜ ಟ್ರಸ್ಟ್ ಪುತ್ತೂರು, ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, (ಐ.ಐ.ಹೆಚ್.ಆರ್.) ಮತ್ತು ಜೆ.ಸಿ.ಐ. ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಬಪ್ಪಳಿಗೆ ಜೈನ ಭವನ ದಲ್ಲಿ ನಡೆದ ಎರಡು ದಿನಗಳ ಹಲಸು ಮತ್ತು ಹಣ್ಣುಗಳ ಮೇಳದ ಸಮಾರೋಪ ಸಮಾರಂಭ ಭಾನುವಾರ ನಡೆಯಿತು.

ಎರಡು ದಿನಗಳಲ್ಲಿ ಹಲಸಿನ ಮೇಳದ ಜೊತೆಗೆ ವಿವಿಧ ಸ್ಪರ್ಧೆಗಳು ನಡೆದಿದ್ದು, ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು.

ಸಮಾರೋಪದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಕೇರಳದಲ್ಲಿ ಹಲಸಿನ ಹಣ್ಣಿಗೆ ಆದ್ಯತೆ ನೀಡಿ. ಅದರ ಬೇರೆ ಬೇರೆ ತಳಿಯನ್ನು ಬೆಳೆಸುವ ಮತ್ತು ಅದರ ಉತ್ಪನ್ನಗಳನ್ನು ಎಲ್ಲಾ ದೇಶಗಳಿಗೆ ರಫ್ತು ಮಾಡುವಲ್ಲಿ ಸರಕಾರ ಪ್ರೇರಣೆ ಕೊಟ್ಟಿದೆ. ಸರಕಾರದಿಂದ ಆ ಯೋಜನೆ ಕಾರ್ಯಗತಗೊಳಿಸುವ ಎಲ್ಲಾ ವಿಚಾರ ಮಾಡಿದ್ದಾರೆ. ಬಹುಶಃ ಕರ್ನಾಟಕದಲ್ಲೂ ಹಲಸಿನ ಹಣ್ಣಿಗೆ ಹೆಚ್ಚಿನ ಮಹತ್ವ ನೀಡಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಹಲಸಿನ ಪ್ರಾಮುಖ್ಯತೆ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಹಲಸಿಗೆ ಮೌಲ್ಯವರ್ಧನೆ ಅಗತ್ಯ ಎಂದು ಹೇಳಿದರು.































 
 

ಜಾಗ ಕೊಡುತ್ತೇನೆ, ದುಡ್ಡು ಕೊಡುತ್ತೇನೆ, ಗಿಡ ನೆಟ್ಟರಾಯಿತು:

ಮಂಗಳೂರಿನಲ್ಲಿ ನನ್ನದು ದೊಡ್ಡ ಜಾಗ ಇದೆ. ೩೨ ಎಕ್ರೆ ಇದೆ. ಅಲ್ಲಿ ಸ್ವಲ್ಪ ಪಕ್ಷಿಗಳಿಗೆ, ಮನುಷ್ಯರಿಗೆ, ಪರಿಸರಕ್ಕಾಗಿ ಸಸಿ ನೆಡಬಹುದು. ನಾನು ಜಾಗ ಕೊಡುತ್ತೇನೆ. ದುಡ್ಡು ಕೊಡುತ್ತೇನೆ. ನೆಡುವ ಜನ ಸಿಕ್ಕಿದರೆ ಸಾಕು. ನಿಮಗೆ ತಳಿಗಳ ಬಗ್ಗೆ ಸಂಶೋಧನೆಯೂ ಆಗುತ್ತದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು. 

ಅಧ್ಯಕ್ಷತೆ ವಹಿಸಿದ ನವತೇಜ ಟ್ರಸ್ಟ್ ಅಧ್ಯಕ್ಷ ಅನಂತಪ್ರಸಾದ್ ನೈತ್ತಡ್ಕ ಮಾತನಾಡಿ ಹಲಸಿನ ಮೇಳವನ್ನು ಮಹಾಲಿಂಗೇಶ್ವರ ಆಶೀರ್ವಾದಿಂದ ಆರಂಭಿಸಿ ಪ್ರತಿ ಹಂತದಲ್ಲೂ ಮೇಳಕ್ಕೆ ಜನರು ಜಾಸ್ತಿ ಆಗುತ್ತಾ ಇದ್ದಾರೆ. 6ನೇ ಮೇಳ ಬೃಹತ್ ಯಶಸ್ವಿ ಕಂಡಿದೆ. ಮುಂದಿನ ಸಲ ಶಾಸಕರು ಹೇಳಿದಂತೆ ಅವರ ಜೊತೆಯಲ್ಲಿ ನಿಂತು ಕಾರ್ಯಕ್ರಮ ಮಾಡಲಿದ್ದೇವೆ ಎಂದರು.

ಸಾವಯವ ಕೃಷಿಕರಾದ ಎ.ಪಿ ಸದಾಶಿವ ಮರಿಕೆ ಸಮಾರೋಪ ಭಾಷಣ ಮಾಡಿದರು. ಜೇಸಿಐ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ಬೆಂಗಳೂರು ಐಐಹೆಚ್‌ಆರ್ ಸಂಸ್ಥೆಯ ವಿಜ್ಞಾನಿ ಡಾ.ಕರುಣಾಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮೇಳದಲ್ಲಿ ಬೆಳಿಗ್ಗೆ ಚಿತ್ರಕಲೆ, ಪ್ರಬಂಧ, ಹಲಸು ಎತ್ತುವ, ಹಲಸು ತಿನ್ನುವ,  ಹಲಸು ಸೊಳೆ ಬಿಡಿಸುವ ಸ್ಪರ್ಧೆಗಳು ನಡೆದಿತ್ತು. ರೋಟರಿ ಯುವ ನಿಯೋಜಿತ ಅಧ್ಯಕ್ಷ ಪಶುಪತಿ ಶರ್ಮ ಅವರು ಬಹುಮಾನ ವಿತರಣೆ ಕಾರ್ಯಕ್ರಮ ನಿರ್ವಹಿಸಿದರು. ನವನೀತ ನರ್ಸರಿಯ ಮಾಲಕ ವೇಣುಗೋಪಾಲ ಎಸ್.ಜೆ ಅವರು ಸ್ವಾಗತಿಸಿ, ಜೇಸಿಐ ಅಧ್ಯಕ್ಷ ಸುಹಾಸ್ ಮರಿಕೆ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top