ಪುತ್ತೂರು: ವಿದ್ಯಾಕ್ಷೇತ್ರವೂ ಪ್ರಸ್ತುತ ವ್ಯಾಪಾರಿಕರಣಗೊಳ್ಳುತ್ತಿದ್ದು, ಇದರ ನಡುವೆ ಮೌಲ್ಯಾಧಾರಿತ ಶಿಕ್ಷಣ ನೀಡುವುದು ಸವಾಲಾಗಿ ಪರಿಣಮಿಸಿದೆ. ಪ್ರಸ್ತುತ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿನ ಮನೋಧರ್ಮ ಬದಲಾಗುತ್ತಿರುವುದು ಕಷ್ಟದ ವಿಷಯ ಎಂದು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ. ಎಂ. ಮೋಹನ ಆಳ್ವ ತಿಳಿಸಿದರು.
ಅವರು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ ಕೊಡಮಾಡಲಾದ ‘ಸ್ವರ್ಣ ಸಾಧನಾ ಪ್ರಶಸ್ತಿ’ಯನ್ನು ಶನಿವಾರ ಪುತ್ತೂರಿನ ಜೈನ ಭವನದಲ್ಲಿ ನಡೆದ ಸಮಾರಂಭದಲ್ಲಿ ಸ್ವೀಕರಿಸಿ ಮಾತನಾಡಿದರು.
ಬದುಕಿನಲ್ಲಿ ಯಾವತ್ತೂ ಋಣಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳದೆ ಧನಾತ್ಮಕ ಚಿಂತನೆ ಬೆಳೆಸಿಕೊಂಡಲ್ಲಿ ನೆಮ್ಮದಿ ಸಂತೋಷ ಕಂಡುಕೊಳ್ಳಲು ಸಾಧ್ಯವಿದೆ. ಜಾತಿ, ಧರ್ಮವನ್ನು ಮೀರಿದ ಸೌಹಾರ್ಧಯುತ ಬದುಕು ನಮ್ಮದಾಗಬೇಕು. ಶಿಸ್ತುಬದ್ದ ಜೀವನ ರೂಪಸಿಕೊಳ್ಳುವುದರಿಂದ ಬದುಕಿನಲ್ಲಿ ನೆಮ್ಮದಿ ಕಾಣಬಹುದಾಗಿದೆ. ನಾನು ಸಣ್ಣ ಪ್ರಾಯದಿಂದಲೇ ಸೌಹಾರ್ಧತೆ ಮತ್ತು ಶಿಸ್ತುಬದ್ಧ ಜೀವನವನ್ನು ರೂಪಿಸಿಕೊಂಡಿದ್ದೇನೆ. ಅಹಂಕಾರ ರಹಿತ ಬದುಕು ಮತ್ತು ಪಾರದರ್ಶಕ ಸಂಪಾದನೆ ನಮ್ಮದಾಗಬೇಕು ಎಂದರು.
ಅಭಿನಂದನಾ ಮಾತುಗಳನ್ನಾಡಿದ ನಿವೃತ್ತ ಪ್ರಾಧ್ಯಾಪಕ ಹಾಗೂ ಸಂಶೋಧಕ ಡಾ. ಪುಡಿಕಾಯಿ ಗಣಪಯ್ಯ ಭಟ್ ಅವರು ಮೂಡಬಿದ್ರೆಯನ್ನು ತನ್ನ ಕರ್ಮಭೂಮಿಯನ್ನಾಗಿಸಿದ ಡಾ. ಮೋಹನ್ ಆಳ್ವ ಅವರು ಅಲ್ಲಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಾಮ್ರಾಜ್ಯವನ್ನು ಕಟ್ಟಿದ್ದಾರೆ. ನೂರಾರು ಮಂದಿ ಮಾಡಬಲ್ಲ ಸಾಧನೆಯನ್ನು ಅವರು ಏಕೈಕವಾಗಿ ಸಾಧಿಸಿದ್ದಾರೆ. ಶಿಕ್ಷಣ ಕ್ಷೇತ್ರವನ್ನು ಮೌಲ್ಯಾಧಾರಿತವಾಗಿ ರೂಪಸುತ್ತಿರುವ ಡಾ. ಆಳ್ವ ಅವರು ವರ್ಷಕ್ಕೆ ರೂ. ೩೫ ಕೋಟಿಯಷ್ಟು ಶಿಕ್ಷಣದ ಸಾಧಕರಿಗೆ ಹಾಗೂ ಉಚಿತ ಶಿಕ್ಷಣಕ್ಕಾಗಿ ವಿನಿಯೋಗಿಸುತ್ತಿದ್ದಾರೆ. ಎಲ್ಲೆಡೆ ಶಿಕ್ಷಣ ವ್ಯಾಪಾರಿಕರಣವಾದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ. ಸುಮಾರು ೩ ಸಾವಿರ ವಿದ್ಯಾರ್ಥಿಗಳು ಉಚಿತ ಶಿಕ್ಷಣವನ್ನು ಇಲ್ಲಿ ಪಡೆಯುತ್ತಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ವೈ. ಶಿವರಾಮಯ್ಯ ಅವರು ಮಾತನಾಡಿ ಓರ್ವ ಶಿಕ್ಷಣ ಇಲಾಖೆಯ ಅಧಿಕಾರಿಯಾಗಿದ್ದು ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಹಲವಾರು ಬಾರಿ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಗಳನ್ನು ಗಮನಿಸಿದ್ದೇನೆ. ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದು ಸರಳ ಕೆಲಸವಲ್ಲ. ಇದರ ಹಿಂದೆ ಡಾ. ಮೋಹನ್ ಆಳ್ವ ಅವರ ಅಪಾರವಾದ ಶ್ರಮವಿದೆ. ಶಿಕ್ಷಣದ ಜೊತೆಗೆ ನುಡಿಸಿರಿ, ವಿರಾಸತ್‌ನಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಅವರು ದೇಶಕ್ಕೆ ಮಾದರಿಯಾಗಿದ್ದಾರೆ ಎಂದರು.
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಪುತ್ತೂರು ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದ ಸಾಧನೆ ಮಾಡಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಅನನ್ಯ ಕೆ, ಇತರ ಸಾಧಕ ವಿದ್ಯಾರ್ಥಿಗಳಾದ ಹಿಮಾನಿ ವಿ.ಸಿ, ತೇಜಸ್ ಮತ್ತು ಉತ್ತಮ್ ಅವರನ್ನು ಅಭಿನಂದಿಸಲಾಯಿತು. ೭೫ ವರ್ಷ ಮೇಲ್ಪಟ್ಟ ಹಿರಿಯರಾದ ೬೧ ಮಂದಿ ಸಂಘದ ಸದಸ್ಯರನ್ನು ಗುರುತಿಸಿ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷೆ ಪ್ರೊ, ಎಂ ವತ್ಸಲಾ ರಾಜ್ಞಿ ಕಾರ್ಯದರ್ಶಿ ತಿರುಮಲೇಶ್ವರ ಭಟ್ ಪಿ, ಕೋಶಾಧಿಕಾರಿ ಶಾಂತಿ ಟಿ ಹೆಗಡೆ, ಜೊತೆ ಕಾರ್ಯದರ್ಶಿ ಎಸ್. ಶಶಿಕಲಾ, ಸಂಘಟನಾ ಕಾರ್ಯದರ್ಶಿ ಬಿ. ಜಗನ್ನಾಥ ರೈ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ರಾಮದಾಸ್ ಗೌಡ ಸ್ವಾಗತಿಸಿದರು. ನಾರಾಯಣ ಭಟ್ ರಾಮಕುಂಜ ನಿರೂಪಿಸಿದರು.