ಪುತ್ತೂರು: ನವತೇಜಸ್ ಪುತ್ತೂರು, ಐಐಎಚ್ ಆರ್ ಬೆಂಗಳೂರು ಹಾಗೂ ಪುತ್ತೂರು ಜೆಸಿಐ ಸಂಯುಕ್ತ ಆಶ್ರಯದಲ್ಲಿ 6ನೇ :ಹಲಸು-ಹಣ್ಣು ಮೇಳ-2023” ಕ್ಕೆ ಶನಿವಾರ ಬೆಳಿಗ್ಗೆ ಬಪ್ಪಳಿಗೆ ಜೈನ ಭವನದಲ್ಲಿ ಚಾಲನೆ ನೀಡಲಾಯಿತು.
ಎರಡು ದಿನಗಳ ಕಾಲ ನಡೆಯುವ ಹಲಸು ಹಣ್ಣು ಮೇಳಕ್ಕೆ ಬೆಂಗಳೂರಿನ ಐಐಎಚ್ ಅರ್ ನಿರ್ದೇಶಕ ಡಾ.ಸಂಜಯ ಕುಮಾರ್ ಸಿಂಗ್ ಹಲಸಿನ ಗಿಡಕ್ಕೆ ನೀರು ಎರೆಯುವ ಮೂಲಕ ಚಾಲನೆ ನೀಡಿ ಮಾತನಾಡಿ, ಹಲಸಿನಹಣ್ಣು ಪ್ರಕೃತಿದತ್ತ ಹಾಗೂ ನಮ್ಮ ಸಂಸ್ಕೃತಿಯ ಹಣ್ಣು. ಇವುಗಳ ಕುರಿತು ಕಳೆದ ಕೆಲವು ವರ್ಷಗಳಿಂದ ಸಂಶೋಧನೆಗಳು ನಡೆಯುತ್ತಾ ಬಂದಿದೆ. ಬೆಂಗಳೂರಿನ ಐಐಎಚ್ ಆರ್ ಹಲಸಿನ ಹಣ್ಣು ಸಹಿತ ವಿವಿಧ ಹಣ್ಣುಗಳಲ್ಲಿರುವ ಔಷಧೀಯ ಗುಣ, ಹಲಸಿನ ಹಣ್ಣಿನ ಬೇರ ಬೇರೆ ರೀತಿಯ ಉತ್ಪನ್ನಗಳನ್ನು ತಯಾರಿಸುವಲ್ಲಿ ಸಂಶೋಧನೆಗಳನ್ನು ಮಾಡುತ್ತಿದೆ ಎಂದ ಅವರು, ಸ್ಥಳೀಯವಾಗಿ ಹಲಸಿನ ಹಣ್ಣೂ ಸಹಿತ ವಿವಿಧ ಹಣ್ಣುಗಳು ಮೌಲ್ಯವರ್ಧನೆ, ಉತ್ಪನ್ನಗಳ ಕುರಿತು ತಿಳಿಸಬೇಕಾದರೆ ಇಂತಹಾ ಮೇಳಗಳಲ್ಲಿ ಪಾಲ್ಗೊಳ್ಳಬೇಕು. ಇಂತಹಾ ಮೇಳಗಳನ್ನು ಆಯೋಜಿಸಿದ ಸಂಘಟಕರ ಉತ್ಸಾಹ ಶ್ಲಾಘನೀಯ ಎಂದರು.
ಐಐಎಚ್ ಅರ್ ಪ್ರಾಜೆಕ್ಟ್ ಕೋ-ಆರ್ಡಿನೇಟರ್ ಪಿ.ಸಿ.ಪಾಟೀಲ್ ಮುಖ್ಯ ಅತಿಥಿಯಾಗಿ ಮಾತನಾಡಿ, ಒಂದು ಕಾಲದಲ್ಲಿ ಹಲಸಿನ ಹಣ್ಣುಗಳನ್ನು ಕೇಳುವವರೇ ಇರಲಿಲ್ಲ. ಆದರೆ ಪ್ರಸ್ತುತ ಹಲಸಿನ ಹಣ್ಣಿನ ಕುರಿತು ದೇಶ-ವಿದೇಶಗಳಲ್ಲಿ ಅರಿವು ಮೂಡಿದೆ. ಇಂತಹಾ ಮೇಳಗಳಿಂದ ವಿಜ್ಞಾನಿಗಳಾದ ನಮ್ಮ ಮೂಲಕ ರೈತರಿಗೆ ಮಾಹಿತಿಗಳನ್ನು ನೀಡಲು ಅನುಕೂಲವಾಗಿದ್ದು, ಇಂತಹಾ ಮೇಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು, ರೈತರು ಭಾಗಿಯಾಗಬೇಕು. ಈ ಮೂಲಕ ಹಲಸಿನ ಹಣ್ಣಿನ ಕುರಿತು ಇರುವ ಸಂಶಯಗಳನ್ನು ದೂರ ಮಾಡಲು ಸಹಕಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ಹಣ್ಣುಗಳ ವಿವಿಧ ಮೌಲ್ಯವರ್ಧನೆ ಮಾಡುವ ಮೂಲಕ ದೇಶಕ್ಕೆ ಒಳ್ಳೆಯ ಕೊಡುಗೆ ನೀಡುವಲ್ಲಿ ಪ್ರಯತ್ನಿಸೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಸುದಾನ ಶಾಲಾ ಸಂಚಾಲಕ ರೆ.ವಿಜಯ ಹಾರ್ವಿನ್ ಮಾತನಾಡಿ, ಹಲಸಿನ ಹಣ್ಣು ಸಹಿತ ವಿವಿಧ ಹಣ್ಣುಗಳನ್ನು ಬೆಳೆಸುವುದು, ಮೌಲ್ಯವರ್ಧನೆ ಮಾಡುವುದು, ಬೇರೆ ಬೇರೆ ರೀತಿಯಲ್ಲಿ ಸಂಸ್ಕರಣೆ ಮಾಡುವ ಕುರಿತು ತರಬೇತಿ ಕಾರ್ಯಕ್ರಮಗಳನ್ನು ಪುತ್ತೂರಿನಲ್ಲಿ ಹಮ್ಮಿಕೊಳ್ಳುವ ಕುರಿತು ಸಂಘಟಕರಲ್ಲಿ ವಿನಂತಿಸಿದರು. ಈ ನಿಟ್ಟಿನಲ್ಲಿ ಯುವಕರು ಮುಂದೆ ಬರಬೇಕು, ಅದರಲ್ಲೂ ಸಾವಯವ ಕೃಷಿಯತ್ತ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಫಝ್ಲಲ್ ರಹೀಮ್, ರೋಟರಿ ಕ್ಲಬ್ ಯುವ ನಿಯೋಜಿತ ಅಧ್ಯಕ್ಷ ಪಶುಪತಿ ಶರ್ಮ, ವಲಯ ಜೆಸಿಐನ, ಕಾರ್ಯಕ್ರಮ ನಿರ್ದೇಶಕಿ ಅಕ್ಷತಾ ಗಿರೀಶ್ ಶುಭ ಹಾರೈಸಿದರು. ಪುತ್ತೂರು ಜೆಸಿಐ ಅಧ್ಯಕ್ಷ ಸುಹಾಸ್ ಮರಿಕೆ ಸ್ವಾಗತಿಸಿದರು. ನವತೇಜದ ಅಧ್ಯಕ್ಷ ಅನಂತಪ್ರಸಾದ್ ವಂದಿಸಿದರು. ಅಡಿಕೆ ಪತ್ರಿಕೆಯ ನಾ.ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ ಮಳಗೆಗಳಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ತಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.