ಧರ್ಮಸ್ಥಳ: ಧರ್ಮಸ್ಥಳ ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ವಿಚಾರಣೆಯಲ್ಲಿರುವ ಆರೋಪಿ ಸಂತೋಷ್ ರಾವ್ ನಿರ್ದೋಷಿ ಎಂದು ಬೆಂಗಳೂರು ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿದ್ದು, ಪ್ರಕರಣದಿಂದ ಖುಲಾಸೆ ಮಾಡಿದೆ.
ಸಂತೋಷ್ ರಾವ್ ವಿರುದ್ಧ ಸಲ್ಲಿಕೆಯಾಗಿರುವ ಸಾಕ್ಷ್ಯಾಧ್ಯಾರಗಳ ಕೊರತೆ ಹಿನ್ನಲೆಯಲ್ಲಿ ಆರೋಪಿಯನ್ನು ದೋಷಮುಕ್ತಿಗೊಳಿಸಲಾಗಿದೆ. ಈ ಕುರಿತು ನ್ಯಾಯಮೂರ್ತಿ ಸಿ.ಬಿ.ಸಂತೋಷ್ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.
ಧರ್ಮಸ್ಥಳದ ಪಾಂಗಾಳ ನಿವಾಸಿ ಚಂದಪ್ಪ ಗೌಡ ಹಾಗೂ ಕುಸುಮಾವತಿ ದಂಪತಿ ಪುತ್ರಿ ಉಜಿರೆ ಎಸ್‍ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯಳನ್ನು 2012 ಅಕ್ಟೋಬರ್ 9 ರಂದು ಕಾಲೇಜಿನಿಂದ ಮನೆಗೆ ಹೋಗುವಾಗ ನಾಪತ್ತೆಯಾಗಿದ್ದರು. ಮರುದಿನ ರಾತ್ರಿ ಧರ್ಮಸ್ಥಳ ಮಣ್ಣಸಂಕ ಬಳಿ ವಿದ್ಯಾರ್ಥಿನಿಯ ಶವ ಪತ್ತೆಯಾಗಿತ್ತು. ಈ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಂಕಿತ ಆರೋಪಿ ಕಾರ್ಕಳ ತಾಲೂಕಿನ ಕುಕ್ಕುಂದೂರು ನಿವಾಸಿ ಸಂತೋಷ್ ರಾವ್ ಈ ಸಂದರ್ಭ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದು ಬಳಿಕ ಪೊಲೀಸರಿಗೆ ಒಪ್ಪಿಸಲಾಗಿತ್ತು. ಬಳಿಕ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿತ್ತು.