ಬೆಂಗಳೂರು: ನೀವು ಇದುವರೆಗೂ ನಿಮ್ಮ ಆಧಾರ್ ಕಾರ್ಡ್ (Aadhar Card) ಅನ್ನು ಪ್ಯಾನ್ ಕಾರ್ಡ್ (PAN Card) ನೊಂದಿಗೆ ಲಿಂಕ್ ಮಾಡದಿದ್ದಲ್ಲಿ, ಇನ್ನು ಕೇವಲ 15 ದಿನಗಳು ಮಾತ್ರವೇ ಬಾಕಿ ಇದೆ. ಪ್ಯಾನ್ – ಆದಾರ್ ಲಿಂಕ್ ಮಾಡಲು 2023ರ ಜೂನ್ 30 ಕೊನೆಯ ದಿನವಾಗಿದೆ. ಈ ಗಡುವಿನೊಳಗೆ ತಪ್ಪದೆ ಈ ಕೆಲಸವನ್ನು ಮಾಡಿ. ಏಕೆಂದರೆ 1,000 ರೂಪಾಯಿ ದಂಡ ಪಾವತಿ ಮೂಲಕ ಪ್ಯಾನ್‌ನೊಂದಿಗೆ ಆಧಾರ್ ಲಿಂಕ್ ಮಾಡಲು ಜೂನ್ 30 ಕೊನೆಯ ದಿನಾಂಕವಾಗಿದೆ. ಈ ದಿನಾಂಕದೊಳಗೆ ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ.
ಆದಾಯ ತೆರಿಗೆ ಇಲಾಖೆ ಈ ಕುರಿತು ಟ್ವೀಟ್ ಮಾಡಿದ್ದು, ಯಾವುದೇ ಕೆಲಸವಿದ್ದರೂ ಜೂನ್ 30 ರ ಮೊದಲು ಆಧಾರ್ ಅನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡುವಂತೆ ಜನರಿಗೆ ಸಲಹೆ ನೀಡಿದೆ. ಆದಾಯ ತೆರಿಗೆ ಕಾಯ್ದೆ 1961 ರ ಅಡಿಯಲ್ಲಿ, ವಿನಾಯಿತಿ ಪಡೆದ ವರ್ಗದಲ್ಲಿ ಬರದ ಎಲ್ಲ ಪ್ಯಾನ್ ಹೊಂದಿರುವವರು ಜೂನ್ 30 ರೊಳಗೆ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡಬೇಕಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಕೊನೆಯ ದಿನಾಂಕದವರೆಗೆ ಕಾಯದೇ ಇಂದೇ ಆಧಾರ್ – ಪ್ಯಾನ್ ಲಿಂಕ್ ಮಾಡಿ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಗಡುವಿನೊಳಗೆ ಲಿಂಕ್ ಆಗದಿದ್ದರೆ ಪ್ಯಾನ್ ನಿಷ್ಕ್ರಿಯ
ಜೂನ್ 30 ರೊಳಗೆ ಆಧಾರ್ ಅನ್ನು ಪ್ಯಾನ್ ಕಾರ್ಡ್‌ನೊಂದಿಗೆ ಲಿಂಕ್ ಮಾಡದಿದ್ದರೆ, ನಂತರ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಇದರಿಂದ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಒಂದು ವೇಳೆ ನೀವು ತೆರಿಗೆದಾರರಾಗಿದ್ದು, ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾದರೆ, ನಿಮಗೆ ತೆರಿಗೆ ಮರುಪಾವತಿ ನೀಡಲಾಗುವುದಿಲ್ಲ. PAN ನಿಷ್ಕ್ರಿಯವಾಗಿರುವ ಅವಧಿಗೆ ಮರುಪಾವತಿಗೆ ಯಾವುದೇ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ. ಅಂತಹ ತೆರಿಗೆದಾರರಿಂದ ಹೆಚ್ಚಿನ TDS ಮತ್ತು TCS ಅನ್ನು ವಿಧಿಸಲಾಗುತ್ತದೆ.