ಪುತ್ತೂರು: ಪುತ್ತೂರು ತಾಲೂಕಿನ 22 ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ನಿಗದಿ ಪ್ರಕ್ರಿಯೆ ಶುಕ್ರವಾರ ಪುತ್ತೂರು ಪುರಭವನದಲ್ಲಿ ನಡೆಯಿತು.
ದ.ಕ. ಜಿಲ್ಲಾಧಿಕಾರಿ ರವಿ ಕುಮಾರ್ ಅವರ ನೇತೃತ್ವದಲ್ಲಿ ಗ್ರಾಪಂ ಸದಸ್ಯರ ಸಮ್ಮುಖದಲ್ಲಿ ಮೀಸಲಾತಿ ನಿಗದಿ ಪ್ರಕ್ರಿಯೆ ನಡೆಯಿತು.
ಕಳೆದ 2020 ರಿಂದ ಇದುವರೆಗೆ ಆಯ್ಕೆಯಾದ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಸಂಪೂರ್ಣ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ರಾಜ್ಯ ಚುನಾವಣಾ ಆಯೋಗಕ್ಕೆ ಕಳುಹಿಸಿಕೊಟ್ಟಿದ್ದರು. ಚುನಾವಣಾ ಆಯೋಗ ಮೀಸಲಾತಿ ಆಯ್ಕೆ ಪ್ರಕ್ರಿಯೆಗೆ ವಿಶೇಷ ಸಾಫ್ಟ್ ವೇರ್ ನ್ನು ಅಭಿವೃದ್ಧಿ ಪಡಿಸಿತ್ತು. ಈ ಸಾಫ್ಟ್ ವೇರ್ ಮೀಸಲಾತಿ ನಿಗದಿಯನ್ನು ಸ್ವಯಂ ಚಾಲಿತವಾಗಿ ನಡೆಸುತ್ತಿದೆ.
ಪ್ರೊಜೆಕ್ಟರ್ ಮೂಲಕ ಸಾಫ್ಟ್ ವೇರ್ ನ ಮೀಸಲಾತಿ ಆಯ್ಕೆ ಪ್ರಕ್ರಿಯೆಯನ್ನು ನಡೆದುದನ್ನು ಗ್ರಾಪಂ ಸದಸ್ಯರು ವೀಕ್ಷಿಸಿದರು. ಮೀಸಲಾತಿ ಇಲ್ಲದ ಪಂಚಾಯತ್ ನ ಮೀಸಲಾತಿ ಪ್ರಕ್ರಿಯೆಯನ್ನು ಚೀಟಿ ಎತ್ತುವ ಮೂಲಕ ನಿಗದಿಪಡಿಸಲಾಯಿತು.
ವೇದಿಕೆಯಲ್ಲಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತ ಗಿರೀಶ್ ನಂದನ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ತಹಶೀಲ್ದಾರ್ ಶಿವಶಂಕರ್ ಉಪಸ್ಥಿತರಿದ್ದರು.