ಪುತ್ತೂರು: ಪ್ರತಿ ವರ್ಷ ವಿಶ್ವ ಆರೋಗ್ಯ ಸಂಸ್ಥೆ ವಿಶ್ವ ಆಹಾರ ಸುರಕ್ಷತೆ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದೆ. ನಾವು ದಿನನಿತ್ಯ ಸೇವಿಸುವ ಆಹಾರದಲ್ಲಿ ರಾಸಾಯನಿಕಗಳ ಮಿತಿಮೀರಿದ ಬಳಕೆ ಮನುಷ್ಯನ ದೇಹದ ಮೇಲೆ ತಾತ್ಕಾಲಿಕ ಹಾಗೂ ದೀರ್ಘಕಾಲಿಕ ಪರಿಣಾಮ ಬೀರುತ್ತದೆ. ಆಹಾರ ಸುರಕ್ಷತಾ ಕೊರತೆಯಿಂದಾಗಿ ವಿಶ್ವದಾದ್ಯಂತ ಪ್ರತಿವರ್ಷ ಮಕ್ಕಳು ಸೇರಿದಂತೆ ಸುಮಾರು 22 ಲಕ್ಷ ಜನತೆ ಸಾವನ್ನಪ್ಪುತ್ತಿದ್ದಾರೆ ಎಂದು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ, ಪ್ರಚಲಿತ ಘಟನೆಗಳ ವಿಶ್ಲೇಷಕ ಸೂರ್ಯ ಹೇಳಿದ್ದಾರೆ.
ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಆಹಾರ ಸುರಕ್ಷತಾ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ವಿಶೇಷ ಮಾಹಿತಿ ಅಭಿಯಾನದಲ್ಲಿ ಅವರು ಮಾತನಾಡಿದರು.
ಆಹಾರದಲ್ಲಿನ ಬ್ಯಾಕ್ಟೀರಿಯಾ, ವೈರಸ್, ಪರಾವಲಂಬಿಗಳು, ರಾಸಾಯನಿಕಗಳು, ಕಲಬೆರಕೆ ಹಾಗೂ ಇತರೆ ಅಂಶಗಳಿಂದಾಗಿ ಅತಿಸಾರ, ಕ್ಯಾನ್ಸರ್ ಸೇರಿದಂತೆ, 200ಕ್ಕೂ ಹೆಚ್ಚು ಬಗೆಯ ರೋಗಗಳಿಗೆ ಕಾರಣವಾಗುತ್ತವೆ ಎಂದು ಅವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಅಕ್ಷತಾ ಎ.ಪಿ. ವಿದ್ಯಾರ್ಥಿಗಳು ತಮ್ಮ ಆಹಾರ ಜಾಗೃತಿಯ ಕುರಿತು ಕ್ರಮ ವಹಿಸುವಂತೆ ಕರೆ ನೀಡಿದರು.
ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ, ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಲಕ್ಷ್ಮೀಕಾಂತ ರೈ ಅನಿಕೂಟೇಲ್ ಪ್ರಾಸ್ತವಿಕವಾಗಿ ಮಾತನಾಡಿದರು. ಎನ್ ಎಸ್ ಎಸ್ ವಿದ್ಯಾರ್ಥಿ ನಾಯಕ ಕೌಶಿಕ್ ಜೆ, ವೃಂದಾ ಕಾರ್ಯಕ್ರಮ ನಿರೂಪಿಸಿದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕಿ, ಎನ್ ಎಸ್ ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಶ್ರೀರಕ್ಷಾ , ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಕಾನೂನು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.