ಬೆಂಗಳೂರು: ಮತಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ತರಲು ಹಾಗೂ ಪಠ್ಯ ಪುಸ್ತಕ ಪರಿಷ್ಕರಣೆಗೆ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಈ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ಹಿಂದೆ ಬಿಜೆಪಿ ಸರಕಾರ ಮತಾಂತರ ನಿಷೇಧ ಕಾಯ್ದೆಯಲ್ಲಿ ಸೇರಿಸಿದ್ದ ಅಂಶಗಳನ್ನು ಕೈಬಿಟ್ಟು ತಿದ್ದುಪಡಿ ಮಾಡಲು ನಿರ್ಧಾರ ಮಾಡಲಾಗಿದೆ. ಜುಲೈನಲ್ಲಿ ನಡೆಯಲಿರುವ ಅಧೀವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡನೆ ಆಗಲಿದೆ.
ಸಚಿವ ಸಂಪುಟ ಸಭೆ ಮುಗಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಸಭೆಯಲ್ಲಿ ಕೈಗೊಳ್ಳಲಾದ ನಿರ್ಧಾರಗಳ ಕುರಿತು ಮಾಹಿತಿ ನೀಡಿ, ರಾಷ್ಟ್ರಗೀತೆ ಹಾಡುವ ಸ್ಥಳಗಳಲ್ಲಿ ಸಂವಿಧಾನದ ಪೀಠಿಕೆ ಓದುವುದನ್ನು ಕಡ್ಡಾಯಗೊಳಿಸುವುದು, ಎಪಿಎಂಸಿ ಕಾನೂನು ಹಿಂಪಡೆಯಲು ನಿರ್ಧಾರ, ಸಣ್ಣ ನೀರಾವರಿ ಇಲಾಖೆ ಪ್ರಸ್ತಾವನೆಗೆ ಅನುಮೋದಿಸಲಾಗಿದೆ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಯ 83 ಕೆರೆಗಳ ಭರ್ತಿ ಮಾಡುವುದು, 1081 ಕೋಟಿ ವೆಚ್ಚದಲ್ಲಿ ವೃಷಭಾವತಿ ನಾಲೆ ನೀರು ಶುದ್ಧೀಕರಿಸಿದ ನೀರನ್ನು ಕೆರೆಗಳಿಗೆ ಹರಿಸಲು ಸಂಪುಟ ಸಮ್ಮತಿಸಿದೆ. ವಿಪತ್ತು ನಿರ್ವಹಣೆ ಪರಿಶೀಲನೆಗೆ ಸಂಪುಟ ಉಪಸಮಿತಿ ರಚನೆ ಮಾಡಿದ್ದು, ಸಾರಿಗೆ ನಿಗಮಗಳ 79 ಕೋಟಿ ರೂ. ಮೋಟಾರ್ ವೆಹಿಕಲ್ ಟ್ಯಾಕ್ಸ್ ವಿನಾಯಿತಿಗೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಪಠ್ಯ ಪುಸ್ತಕ ಪರಿಷ್ಕರಣೆಗೆ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಆರ್ ಎಸ್ ಎಸ್ ಸಂಸ್ಥಾಪಕ ಕೇಶವ ಹಡ್ಸೇವಾರ್ ಭಾಷಣ ತೆಗೆದಿದ್ದೇವೆ. ಸಾವರ್ ಕರ್, ಚಕ್ರವರ್ತಿ ಸೂಲಿಬೆಲೆ ಬರೆದ ಅಂಶಗಳನ್ನು ಸಹ ತೆಗೆದಿದ್ದೇನೆ. ಮಕ್ಕಳು ಸರಿಯಾದ ವಿಚಾರ ಕಲಿಯಬೇಕೆಂಬ ನಿಟ್ಟಿನಲ್ಲಿ ಕೆಲ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದರು.
ಪಠ್ಯ ಪುಸ್ತಕ ಪರಿಷ್ಕರಣೆಗೆ ರಾಜಪ್ಪ ದಳವಾಯಿ ನೇತೃತ್ವದಲ್ಲಿ ಐದು ಮಂದಿಯ ಸಮಿತಿ ರಚಿಸಲಾಗಿದ್ದು, ಕನ್ನಡದಲ್ಲಿ ಸಮಾಜ ವಿಜ್ಞಾನದಲ್ಲಿ 6 ರಿಂದ 10ನೇ ತರಗತಿವರೆಗೆ ಕೆಲವು ಬದಲಾವಣೆ ಮಾಡಲಾಗಿದೆ. ಸಾವಿತ್ರಿ ಪುಲೆ ಅವರ ನೀ ಹೋದ ಮರು ದಿನ ವಿಚಾರ ಮತ್ತು ಇಂದಿರಾ ಗಾಂಧಿಗೆ ನೆಹರು ಬರೆದ ನೀ ಬರೆದ ಪತ್ರ ಮರು ಸೇರ್ಪಡೆ ಮಾಡಲಾಗಿದೆ ಎಂದು ತಿಳಿಸಿದರು.