ಬೆಂಗಳೂರು : ಮನೆಯ ಯಜಮಾನಿಗೆ 2 ಸಾವಿರ ರೂಪಾಯಿಗಳ ರಾಜ್ಯ ಸರಕಾರದ ಗೃಹಲಕ್ಷ್ಮೀ ಯೋಜನೆಗೆ ಜೂ.16 ರಿಂದ ಆನ್ ಲೈನ್, ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘೋಷಣೆ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅವರು ಇಂದು ಮಾತನಾಡಿ, ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರು ಗೃಹಲಕ್ಷ್ಮೀ ಯೋಜನೆಗೆ ಅರ್ಜಿಯನ್ನು ನಾಳೆಯಿಂದಲೇ ಸಲ್ಲಿಸಬಹುದು.
ಸೇವಾಸಿಂಧು ಪೋರ್ಟಲ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಮಹಿಳೆಯರು ಆಧಾರ್ ಕಾರ್ಡ್ ಪತಿಯ ಆಧಾರ್ ಕಾರ್ಡ್ , ಮೊಬೈಲ್ ಸಂಖ್ಯೆ, ಅರ್ಜಿದಾರರ ಬ್ಯಾಂಕ್ ಖಾತೆ ಮಾಹಿತಿ ನೀಡಬೇಕು. ಅರ್ಜಿದಾರರು ಮಧ್ಯವರ್ತಿಗಳ ಮೇಲೆ ಅವಲಂಬಿತವಾಗದೆ ಅರ್ಜಿಯನ್ನು ಸ್ವತಃ ಮೇಲೆ ತಿಳಿಸಿದ ಕೇಂದ್ರಗಳಲ್ಲಿ ಸಲ್ಲಿಸಬೇಕು. ಈ ಕುರಿತು ಯಾವುದೇ ಗೊಂದಲಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ 1902 ಕ್ಕೆ ಕರೆ ಮಾಡಬಹುದು ಎಂದು ತಿಳಿಸಿದ ಅವರು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇರುವುದಿಲ್ಲ. ಪ್ರಕ್ರಿಯೆ ವರ್ಷಪೂರ್ತಿ ಇರುತ್ತದೆ ಎಂದು ತಿಳಿಸಿದರು.
ನಾಳೆ ಮಧ್ಯಾಹ್ನ 1.30 ರಿಂದ ಅರ್ಜಿ ಸಲ್ಲಿಸಬಹುದು. ಗೃಹಲಕ್ಷ್ಮೀ ಯೋಜನೆಗೆ ವಾರ್ಷಿಕ 30 ಸಾವಿರ ಕೋಟಿ ವೆಚ್ಚ ನಿರೀಕ್ಷೆಯಿದ್ದು, ಆಗಸ್ಟ್ 18 ರಂದು ಬೆಳಗಾವಿ ಅಥವಾ ಹುಬ್ಬಳ್ಳಿಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಸಿಎಂ ಸಿದ್ಧರಾಮಯ್ಯ ಚಾಲನೆ ನೀಡಲಿದ್ದಾರೆ ಮಾಹಿತಿ ನೀಡಿದರು.