ಪುತ್ತೂರು: ಬಂಟರ ಯಾನೆ ನಾಡವರ ಮಾತೃ ಸಂಘ, ಬಂಟರ ಸಂಘ ಪುತ್ತೂರು ತಾಲೂಕು ವತಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನಾ ಸಮಾರಂಭ ಮತ್ತು ವಿದ್ಯಾರ್ಥಿ ವೇತನವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜೂ. 18ರಂದು ಪುತ್ತೂರಿನ ಕೊಂಬೆಟ್ಟು ಬಂಟರ ಭವನದಲ್ಲಿ ನಡೆಯಲಿದೆ ಎಂದು ಮಂಗಳೂರು ಬಂಟರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮತ್ತು ಬಂಟರ ಸಂಘ ಪುತ್ತೂರು ಘಟಕದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ತಿಳಿಸಿದ್ದಾರೆ.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ದೀಪ ಪ್ರಜ್ವಲನೆ ನಡೆಸಲಿದ್ದಾರೆ. ಪುತ್ತೂರು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ. ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ನೂತನ ಶಾಸಕ ಅಶೋಕ್ ರೈ ಅವರನ್ನು ಅಭಿನಂದಿಸಲಿದ್ದಾರೆ. ಮಂಗಳೂರು ಬಂಟರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಸವಣೂರು ಸೀತಾರಾಮ ರೈ ವಿದ್ಯಾರ್ಥಿ ವೇತನ ವಿತರಣೆ ಮಾಡಲಿದ್ದಾರೆ. ಬಂಟರ ಸಂಘದ ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು ಪ್ರತಿಭಾ ಪುರಸ್ಕಾರ ಮಾಡಲಿದ್ದಾರೆ. ಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಯನ್ ಜಗನ್ನಾಥ ರೈ ಮಾದೋಡಿ, ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ ಮತ್ತು ಬೂಡಿಯಾರ್ ರಾಧಾಕೃಷ್ಣ ರೈ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮಕ್ಕೆ ಮೊದಲು ಹರೀಣಾಕ್ಷಿ ಜೆ ಶೆಟ್ಟಿ ನೇತೃತ್ವದಲ್ಲಿ ‘ನೃತ್ಯ ವೈಭವ’ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಕರಾವಳಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ನೃತ್ಯ ವೈಭವ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ ಅವರು ಶಾಸಕರ ಅಭಿನಂದನಾ ಸಮಾರಂಭವು ಕಾರ್ಯಕ್ರಮವು ರಾಜಕೀಯ ರಹಿತವಾಗಿ ಎಲ್ಲರನ್ನೂ ಸೇರಿಸಿಕೊಂಡು ನಡೆಸಲಾಗುತ್ತಿದೆ. ಪುತ್ತೂರಿನಲ್ಲಿ ಆಶೋಕ್ ರೈ ಸೇರಿದಂತೆ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಬಂಟ ಸಮುದಾಯದ 6 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಂಟ ಸಮುದಾಯವು ನಾಯಕತ್ವದಲ್ಲಿ ಮುಂದೆ ಇದ್ದಾರೆ. ಈ ನಿಟ್ಡಿನಲ್ಲಿ ಮುಂದೆ ಮಾತೃ ಸಂಘದ ವತಿಯಿಂದ ಬಂಟ ಸಮುದಾಯದ ಎಲ್ಲಾ 6 ಶಾಸಕರನ್ನು ದೊಡ್ಡ ಮಟ್ಟದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಪುತ್ತೂರು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ರೈ ಡಿಂಬ್ರಿ, ಕೋಶಾಧಿಕಾರಿ ಕೃಷ್ಣ ಪ್ರಸಾದ್ ಆಳ್ವ, ನಿರ್ದೇಶಕ ನಿರಂಜನ ರೈ ಮಠಂತಬೆಟ್ಟು ಮತ್ತು ಯುವ ಬಂಟರ ಸಂಘದ ಸದಸ್ಯ ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು