ಪುತ್ತೂರು: ಕರ್ನಾಟಕ ಸರಕಾರ ರಾಜ್ಯದ ಮಹಿಳೆಯರಿಗೆ ಸರಕಾರಿ ಬಸ್ಸಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿರುವುದು ಸ್ವಾಗತಾರ್ಹವಾಗಿದ್ದು, ರೈಲಿನಲ್ಲೂ ಮಹಿಳೆಯರಿಗೆ, ವೃದ್ಧಿರಿಗೆ ಉಚಿತ ಪ್ರಯಾಣಕ್ಕೆ ಕೇಂದ್ರ ಸರಕಾರ ಅವಕಾಶ ಕಲ್ಪಿಸಲಿ ಎಂದು ಪುತ್ತೂರು ತಾಲೂಕು ಬೀಡಿ ಕಾರ್ಮಿಕ ಸಂಘದ ಕಾರ್ಯದರ್ಶಿ, ಸಿಐಟಿಯು ಮುಖಂಡ ಬಿ.ಎಂ.ಭಟ್ ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಮಾಜದಲ್ಲಿ ಮಹಿಳಾ ಋಣ ತೀರಿಸಲು ಯಾರಿಂದಲೂ ಅಸಾದ್ಯ. ಹೊಸ ಜೀವಿಯ ಜನನಕ್ಕೆ ಅಂದರೆ ಜಗತ್ತಿನ ಭಾವಿ ಜನಾಂಗದ ಸೃಷ್ಟಿಗೆ ಕಾರಣವಾಗುವ ಮಹಿಳೆ ಒಮ್ಮೆ ತನ್ನ ಜೀವವನ್ನೇ ತೆತ್ತು ಮರು ಜನ್ಮ ತಾಳುವ ಮಹಿಳೆಯ ಋಣ ತೀರಿಸಲು ಸಾದ್ಯವೇ ಹೇಳಿ. ಈ ನಿಟ್ಟಿನಲ್ಲಿ 1986 ರಲ್ಲೇ ರಲ್ಲೇ ಹೆರಿಗೆ ಭತ್ತೆ ನೀಡಲು ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರಯತ್ನ ನೆನೆಯಬೇಕು. ಈಗ ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ತನ್ನ ಮಹಿಳಾ ಪರ ನೀತಿಯನ್ನು ಜಾರಿ ಮಾಡಿ ಋಣ ತೀರಿಸುವ ಪ್ರಯತ್ನಕ್ಕೆ ಕೈಹಾಕಿರುವುದು ಸ್ವಾಗತಾರ್ಹ. ಆದರೆ ಇದು ರಾಜ್ಯದ ಎಲ್ಲಾ ಮಹಿಳೆಯರು ಪಡೆಯುವಂತಾಗಲು ಸರಕಾರಿ ಬಸ್ಸು ಇಲ್ಲದ ಎಲ್ಲಾ ಹಳ್ಳಿಗಳಿಗೆ ಸರಕಾರಿ ಬಸ್ಸು ಒದಗಿಸುವ ಕೆಲಸ ಮಾಡುವುದು ಕೂಡಾ ಸರಕಾರದ ಕರ್ತವ್ಯವಾಗುವುದು. ಇಲ್ಲವಾದರೆ ರಾಜ್ಯದ ಅರ್ದದಷ್ಟು ಮಹಿಳೆಯರು ಈ ಶಕ್ತಿ ಯೋಜನೆಯಿಂದ ವಂಚಿತರಾಗುವರು. ಸರಕಾರ ಈಬಗ್ಗೆ ಕ್ರಮಕೈಗೊಳ್ಳದಿದಲ್ಲಿ ಮಹಿಳಾ ಕಾರ್ಮಿಕರ ಪರ ಸಿಐಟಿಯು ಹೋರಾಟ ನಡೆಸುವುದು ಅನಿವಾರ್ಯವಾಗುವುದು ಎಂದರು
ಅದೇ ರೀತಿ ರೈಲಿನಲ್ಲಿ ಹಿರಿಯ ನಾಗರಿಕರಿಗೆ, ಅಂಗಹೀನರಿಗೆ ನೀಡುತ್ತಿದ್ದ ರಿಯಾಯತಿ ದರವನ್ನು ಕೊರೋನಾ ಸಮಯದಲ್ಲಿ ಕೇಂದ್ರ ಸರಕಾರ ರದ್ದು ಪಡಿಸಿ ದರವನ್ನೂ ಏರಿಸಿದೆ. ಈಗ ಕೊರೋನ ಸಮಸ್ಯೆಯಿಂದ ಹೊರಬಂದರೂ ಏರಿಸಿದ ರೈಲಿನ ದರವನ್ನು ಇಳಿಸಿಲ್ಲ, ನೀಡುತ್ತಿದ್ದ ರಿಯಾಯಿತಿಯನ್ನು ನೀಡಿಲ್ಲ. ಕೇಂದ್ರ ಸರಕಾರ ತಕ್ಷಣ ಮದ್ಯಪ್ರವೇಶಿಸಿ ಏರಿಸಿದ ರೈಲ್ವೇ ದರವನ್ನು ಇಳಿಸಿ ಜನರಿಗೆ ನೀಡಿದ ಹೊರೆಯನ್ನು ಇಳಿಸಬೇಕು. ಮಾತ್ರವಲ್ಲ ಅಂಗಹೀನರಿಗೆ, ಹಿರಿಯ ನಾಗರಿಕರಿಗೆ ನೀಡುತ್ತಿದ್ದ ರಿಯಾಯತಿ ದರವನ್ನು ಮತ್ತೆ ನೀಡಲು ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಮಾತ್ರವಲ್ಲ ರೈಲಲ್ಲಿ ಪ್ರಯಾಣಿಸುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮತ್ತು ಸ್ಥಳೀಯವಾಗಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ ತಾನೂ ಮಹಿಳಾಪರ ಎಂಬುದನ್ನೂ ಸಾಬೀತು ಪಡಿಸಿ ಸಮಾಜದ ಋಣ ತೀರಿಸಲು ಪ್ರಯತ್ನಿಸಬೇಕು ಎಂದವರು ಹೇಳಿದರು.