ಪುತ್ತೂರು: ಮಳೆ್ಗಾಲ ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ನಿರಂತರ ಮಳೆ ಸುರಿಯಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ವಾಹನ ಚಾಲಕರು, ಸಾರ್ವಜನಿಕರು ಜಾಗ್ರತೆ ವಹಿಸುವುದು ಅತೀ ಅಗತ್ಯ.
ಮಳೆಗಾಲ ಬಂತೆಂದರೆ ಸಾಕು. ರಸ್ತೆಗಳಲ್ಲಿ, ಚರಂಡಿಗಳಲ್ಲಿ ನೀರು ಹರಿಯುವುದು ಸಹಜ. ಹೀಗೆ ನಿಂತ ನೀರಿನ ಮೇಲೆ ವಾಹನಗಳು ಚಲಿಸುವುದರಿಂದ ರಸ್ತೆ ಬದಿಗಳಲ್ಲಿ ನಡೆದುಕೊಂಡು ಹೋಗುವ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ರಸ್ತೆಗಳಲ್ಲಿನ ಕೆಸರು ನೀರಿನ ಸಿಂಚನವಾಗುವುದನ್ನು ನಾವು ಕಾಣುತ್ತೇವೆ. ವಾಹನ ಸವಾರರು ನಿಂತ ನೀರಿನ ಬಳಿ ವಾಹನ ಚಲಾಯಿಸುವಾಗ ನಿಧಾನಕ್ಕೆ ಚಲಿಸುವುದರ ಜತೆ ಜಾಗೃತರಾಗುವುದು ಅತೀ ಅಗತ್ಯ.
ಮಳೆಗಾಲದಲ್ಲಿ ವಾಹನ ಚಾಲಕರು ತಮ್ಮ ವಾಹನಗಳನ್ನು ಚಲಾಯಿಸುವಾಗ ನಿಧಾನಕ್ಕೆ ಚಲಾಯಿಸುವುದು ಅಗತ್ಯ. ಮಳೆಗಾಲದಲ್ಲಿ ವಾಹನಗಳ ಬ್ರೇಕ್ ಸಮಸ್ಯೆ ಉಂಟಾಗುತ್ತದೆ. ನೀರಿನ ಅಂಶದಿಂದ ಬ್ರೇಕ್ ಸರಿಯಾಗಿ ಹಿಡಯುವುದಿಲ್ಲ. ಈ ನಿಟ್ಟಿನಲ್ಲಿ ವಾಹನ ಚಾಲಕರಿಗೆ ನಿಧಾನಗತಿಯೇ ಸಮಸ್ಯೆಗೆ ಪರಿಹಾರ ಎಂಬುದನ್ನು ತಿಳಿದಿರಬೇಕು.
ಅದರಲ್ಲೂ ಮುಖ್ಯವಾಗಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಆಟೋ ರಿಕ್ಷಾ, ಕಾರು ಮುಂತಾದ ವಾಹನಗಳ ಚಾಲಕರು ಅಜಾಗರೂಕತೆಯಿಂದ ವಾಹನ ಚಲಾಯಿಸಿದಲ್ಲಿ ಮಕ್ಕಳ ಭವಿಷ್ಯಕ್ಕೆ ಮಾರಕವಾಗಬಹುದು ಎಂಬುದನ್ನು ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಸಾಮರ್ಥ್ಯಕ್ಕಿಂತ ಅಧಿಕ ವಿದ್ಯಾರ್ಥಿಗಳನ್ನು ತಮ್ಮ ವಾಹನಗಳಲ್ಲಿ ಕರೆದುಕೊಂಡು ಹೋಗುವುದು ತಪ್ಪು. ಇದು ಅಪಘಾತಕ್ಕೆ ಕಾರಣವಾಗಲಿದೆ ಎಂಬುದನ್ನು ತಿಳಿದಿರಬೇಕು.
ಮುಂದಿನ ದಿನಗಳಲ್ಲಿ ಕುಂಭದ್ರೋಣ ಮಳೆಯಾಗುವ ಸಂದರ್ಭದಲ್ಲಂತೂ ಅತೀ ಹೆಚ್ಚಿನ ಜಾಗ್ರತೆ ವಹಿಸುವುದು ಒಳ್ಳೆಯದು. ಅಜಾಗರೂಕತೆಯಿಂದ, ನಿರ್ಲಕ್ಷ್ಯತನದಿಂದ ಈ ಹಿಂದೆ ಅದೆಷ್ಟೋ ಅಪಘಾತಗಳು ನಮ್ಮ ಕಣ್ಣೆದುರೇ ನಡೆದ ಉದಾಹರಣೆಗಳಿವೆ. ಅಪಘಾತ ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳುವುದು ಎಲ್ಲದಕ್ಕೂ ಪರಿಹಾರ.