ಮಂಗಳೂರು: ಭಾರತೀಯ ಹವಾಮಾನ ಇಲಾಖೆ ಕರ್ನಾಟಕ ಕರಾವಳಿ ಭಾಗದಲ್ಲಿ “ಹೈ ವೇವ್ ಅಲರ್ಟ್” ಘೋಷಣೆ ಮಾಡಿದೆ.
ದ.ಕ.ಜಿಲ್ಲೆ 42 ಕಿ.ಮೀ. ಕರಾವಳಿ ತೀರವನ್ನು ಹೊಂದಿದ್ದು, ಇತ್ತೀಚೆಗೆ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಪಶ್ಚಿಮ ಕರಾವಳಿಗೆ ಬಿಪರ್ ಜಾಯ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆಗಳಿವೆ. ಪರಿಣಾಮ ಸಮುದ್ರದ ಅಲೆಗಳ ಎತ್ತರ 3 ರಿಂದ 4 ಮೀ ನಷ್ಟು ಇರಲಿದ್ದು, ಕರಾವಳಿಯಲ್ಲಿ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣದಿಂದಾಗಿ ಮುಂದಿನ 5 ದಿನಗಳ ವರೆಗೆ ಅಂದರೆ ಜೂ.19 ರ ವರೆಗೆ ಕರಾವಳಿ ತೀರದಲ್ಲಿ ಸಾರ್ವಜನಿಕರು, ಪ್ರವಾಸಿಗರು, ಮಕ್ಕಳು, ಸ್ಥಳೀಯರು, ಮೀನುಗಾರರು ಸಮುದ್ರಕ್ಕೆ ಯಾವುದೇ ಕಾರಣಕ್ಕೂ ಇಳಿಯಬಾರದು. ಅಲ್ಲದೆ ಸಮುದ್ರ ಬಳಿ ಓಡಾಡುವುದನ್ನು ಕೂಡಾ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ಎಚ್ಚರಿಕೆ ನೀಡಿದೆ.
ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ಯಾವುದೇ ಸಮಸ್ಯೆಗಳು ಉಂಟಾದಲ್ಲಿ 24*7 ಕಂಟ್ರೋಲ್ ರೂಂ 1077/0824-2442590 ಈ ಸಂಖ್ಯೆಯನ್ನು ಸಂಪರ್ಕಿಸಬಹುದು.