ನೆಲ್ಯಾಡಿ : ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನಲೆಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆರಿಬ್ಬರ ಸಹಿತ 17 ಮಂದಿಯನ್ನು ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ.
ತಾಲೂಕು ಪಂಚಾಯಿತಿ ಸದಸ್ಯೆ ಉಷಾ ಅಂಚನ್, ಆಶಾ ಲಕ್ಷ್ಮಣ್ ಗುಂಡ್ಯ, ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಮಾಜಿ ಸದಸ್ಯ ಪ್ರವೀಣ್ ಕುಮಾರ್ ಕೆಡೆಂಜಿ, ಕುಟ್ರುಪ್ಪಾಡಿ ಗ್ರಾಪಂ ಮಾಜಿ ಸದಸ್ಯ ಸೇವಿಯರ್ ಬೇಬಿ, ಕಡಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ದೇವಾಡಿಗ, ಎಪಿಎಂಸಿ ಮಾಜಿ ಸದಸ್ಯ ರಾಮಕೃಷ್ಣ ಕೆಂಜಾಳ, ಕಡಬ ಬ್ಲಾಕ್ ಎಸ್ ಸಿ ಘಟಕದ ಅಧ್ಯಕ್ಷ ಶಶಿಧರ ಬೊಟ್ನಡ್ಕ, ಕಡಬ ಯುವ ಕಾಂಗ್ರೆಸ್ ಮುಖಂಡ ಪೈಜಲ್ ಕಡಬ, ಜೈನ್ ಆತೂರು, ರವಿ ರುದ್ರಪಾದ, ಶೋಬಿತ್ ಸುಬ್ರಹ್ಮಣ್ಯ, ಮಹೇಶ್ ಭಟ್ ಕರಿಕ್ಕಳ, ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ಭವಾನಿ ಶಂಕರ್, ಗೋಕುಲ್ ದಾಸ್, ಚೇನತ್ ಕಜೆಗದ್ದೆ, ಆನಂದ ಬೆಳ್ಲಾರೆ ಅವರನ್ನು ಉಚ್ಛಾಟಿಸಲಾಗಿದೆ ಎಂದು ತಿಳಿದು ಬಂದಿದೆ.
ಪಕ್ಷದ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ಕೆ.ರಹಮಾನ್ ಖಾನ್ ಈ ಆದೇಶ ಮಾಡಿದ್ದಾರೆ. ಚುನಾವಣೆ ಪ್ರಚಾರದ ವೇಳೆ ಪಕ್ಷದ ವಿರುದ್ಧ ಪ್ರಚಾರ ನಡೆಸಿದ ಹಿನ್ನಲೆಯಲ್ಲಿ ಉಚ್ಛಾಟಿಸಲಾಗಿದೆ ಎಂದು ಮಾಹಿತಿ ಲಭಿಸಿದೆ.
ಸುಳ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಿ.ಕೃಷ್ಣಪ್ಪ ರಾಮಕುಂಜ ವರ ವಿರುದ್ಧ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡುವಂತೆ ಮಾಜಿ ಬಿ.ರಮಾನಾಥ ರೈ ಅವರಿಗೆ ಸೂಚನೆ ನೀಡಿದ್ದರು. ಚುನಾವಣೆ ನಡೆದು ಸುಳ್ಯ ಬಿಜೆಪಿ ಅಭ್ಯರ್ಥಿ ವಿರುದ್ಧ ಅವರು 30 ಸಾವಿರ ಮತಗಳಿಂದ ಸೋಲು ಕಂಡಿದ್ದರು.