ನೆಲ್ಯಾಡಿ : ರಾಷ್ಟ್ರೀಯ ಹೆಚ್ಚಾರಿ 75ರ ಶಿರಾಡಿ ಅಡ್ಡ ಹೊಳೆ ಸೇತುವೆಯಿಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಪರಿಣಾಮ ಓರ್ವ ಮೃತಪಟ್ಟರೆ ಇನ್ನೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಭಾನುವಾರ ಮುಂಜಾನೆ ನಡೆದಿದೆ.
ಮೃತಪಟ್ಟವರನ್ನು ತಮಿಳುನಾಡಿನ ಹೊಸೂರು ಮೂಲದ ಹರಿಪ್ರಸಾದ್ (50) ಎಂದು ಗುರುತಿಸಲಾಗಿದ್ದು, ಗೋಪಿ (48) ಎಂಬವರು ಗಾಯಗೊಂಡವರು.
ಕಾರು ಹೊಸೂರಿನಿಂದ ಮಂಗಳೂರು ಕಡೆಗೆ ಬರುತ್ತಿತ್ತು ಎನ್ನಲಾಗುತ್ತಿದೆ. ಗಾಯಾಳುವಿಗೆ ನೆಲ್ಯಾಡಿಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯ ಪರಶುರಾಮ ಕ್ರೇನ್ ತಂಡ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಕಾರು ಮೇಲೆತ್ತುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.