ಸವಣೂರು : ಇಂಡಿಯನ್ ರೆಡ್ ಕ್ರಾಸ್ ಘಟಕ ಪುತ್ತೂರು, ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನ ಘಟಕ ಹಾಗೂ ರೋಟರ‍್ಯಾಕ್ಟ್ ಕ್ಲಬ್ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಸವಣೂರು ಯುವಕ ಮಂಡಲ ಹಾಗೂ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಇದರ ಜಂಟಿ ಆಶ್ರಯದಲ್ಲಿ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ ಜೂ.10ರಂದು ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಮಾತನಾಡಿ,ಜಾತ್ಯಾತೀತತೆಯನ್ನು ಮೀರಿದ, ಜೀವವನ್ನು ಉಳಿಸುವ ರಕ್ತದಾನ ದಾನಗಳಲ್ಲೇ ಅತ್ಯಂತ ಶ್ರೇಷ್ಠವಾದದ್ದು ಎಂದರು.
ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಮಾರ್ಕೆಟಿಂಗ್ ಆಫೀಸರ್ ಜೈಸನ್ ಜೋರ್ಜ್ ಮಾತನಾಡಿ, ಇಂದು ನಮ್ಮ ಸಮಾಜದಲ್ಲಿ ರಕ್ತದ ಕೊರತೆಯಿಂದ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ, ರಕ್ತಕ್ಕೆ, ಜೀವಕ್ಕೆ ಯಾವುದೇ ಜಾತಿ ಭೇದವಿಲ್ಲ.ನಮ್ಮ ಸಮಾಜದಲ್ಲಿ ಇಂದು ಜೀವ ಉಳಿಸುವ ರಕ್ತದಲ್ಲಿ ಸಮಾನತೆಯನ್ನು ಕಾಣುತ್ತಿದ್ದೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಕೆ ನಾರಾಯಣ ಮೂರ್ತಿ ಮಾತನಾಡಿ, ನನಗೇನು ಲಾಭವಿದೆ, ನನಗೇನಾದರು ಆದೀತೆ ಎನ್ನುವ ಪ್ರಶ್ನೆ ರಕ್ತದಾನ ಮಾಡುವ ನಮ್ಮನ್ನು ಇಂದು ಕಾಡುತ್ತಿದೆ. ವೈಯಕ್ತಿಕವಾಗಿ ಬಹಳಷ್ಟು ಲಾಭವಿರುವ ನಮ್ಮ ಆರೋಗ್ಯವನ್ನು ಚೆನ್ನಾಗಿಡುವ, ರಕ್ತದಾನದಿಂದ ಎಲ್ಲರಿಗೂ ಒಳ್ಳೆಯದಾಗಲಿ ಎಂದರು.
ಕಾರ್ಯಕ್ರಮದಲ್ಲಿ ಇಂಡಿಯನ್ ರೆಡ್ ಕ್ರಾಸ್ ಪುತ್ತೂರು ಘಟಕದ ಅಧ್ಯಕ್ಷ ಸಂತೋಷ್ ಶೆಟ್ಟಿ ,ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ,ಶಶಿಧರ್ ಕೆ ಮಾವಿನಕಟ್ಟೆ, ರಾಜ್ಯಪ್ರಶಸ್ತಿ ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ಸಚಿನ್ ಹಾಗೂ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲ ಶೇಷಗಿರಿ ಎಂ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಗಾಯತ್ರಿ ಪ್ರಾರ್ಥಿಸಿದರು. ಮಹಮ್ಮದ್ ಹಾರಿಸ್ ಸ್ವಾಗತಿಸಿ, ಶಮೀರ್ ವಂದಿಸಿದರು. ಸ್ವಸ್ತಿ ಕಾರ್ಯಕ್ರಮ ನಿರ್ವಹಿಸಿದರು.