ಗುವಾಹತಿ: ಮಣಿಪುರದಲ್ಲಿ ಕಳೆದ ತಿಂಗಳಿನಿಂದ ನಡೆದ ಜನಾಂಗೀಯ ಸಂಘರ್ಷದ ವೇಳೆ ಉದ್ರಿಕ್ತ ಗುಂಪು ಲೂಟಿ ಮಾಡಿದ ಶಸ್ತ್ರಾಸ್ತ್ರಗಳನ್ನು ಭದ್ರತಾ ಸಿಬ್ಬಂದಿಗಳು ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆಯಲಾಗಿದ್ದು, 11763 ಮದ್ದುಗುಂಡುಗಳು, 896 ಶಸ್ತ್ರಾಸ್ತ್ರಗಳು ಹಾಗೂ 200 ಬಾಂಬ್‍ಗಳನ್ನು ವಶಕ್ಕೆ ಪಡೆದಿವೆ.
ರಾಜ್ಯ ಸರಕಾರದ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಈ ಮಾಹಿತಿ ನೀಡಿದ್ದು, ಈ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಲೂಟಿ ಮಾಡಿರುವ ನಿಖರ ಮಾಹಿತಿ ಇಲ್ಲದಿದ್ದರೂ ಗ್ರೆನೇಡ್ ಮತ್ತು ಸಣ್ಣಪುಟ್ಟ ಫಿರಂಗಿಗಳು ಸೇರಿದಂತೆ 50 ಸಾವಿರ ಮದ್ದು ಗುಂಡುಗಳು, 3500 ಶಸ್ತ್ರಾಸ್ತ್ರಗಳು ಲೂಟಿಯಾಗಿವೆ ಎಂದು ಸರಕಾರ ಹೇಳಿತ್ತು.
ಇದೀಗ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಮನವಿಯಂತೆ ಸ್ಥಳೀಯರು ಶಸ್ತ್ರಾಸ್ತ್ರಗಳನ್ನು ಮರಳಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಲೂಟಿಯಾದ ಶಸ್ತ್ರಾಸ್ತ್ರಗಳ ಪೈಕಿ ಬಹುಪಾಲನ್ನು ಮರಳಿ ಪಡೆಯುವ ವಿಶ್ವಾಸವನ್ನು ಮಣಿಪುರ ಆಡಳಿತ ವ್ಯಕ್ತಪಡಿಸಿದೆ.