ಸವಣೂರು: ಪ್ರಾಚೀನ ದೇವಸ್ಥಾನವಾದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಳದ ಶಿಲಾನ್ಯಾಸ ಕಾರ್ಯಕ್ರಮ ಶನಿವಾರ ಬೆಳಿಗ್ಗೆ ವಿಜೃಂಭಣೆಯಿಂದ ನಡೆಯಿತು. ಇದೇ ಸಂದರ್ಭ ಶಿವನ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಶುಭಕೋರುವಂತೆ ವಿಷ್ಣುವಿನ ಅವತಾರವಾದ ಕೂರ್ಮ (ಆಮೆ) ಪ್ರತ್ಯಕ್ಷವಾದ ಘಟನೆಗೆ ಬರೆಪ್ಪಾಡಿ ದೇವಳ ಸಾಕ್ಷಿಯಾಯಿತು.
ದೇವಸ್ಥಾನ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ಶಿಲಾನ್ಯಾಸ ನಡೆಯುತ್ತಿದೆ. ಹೀಗೆ ನಡೆಯುವ ಶಿಲಾನ್ಯಾಸಕ್ಕೆ ಒಂದು ಹೊಂಡವನ್ನು ನಿರ್ಮಿಸಲಾಗಿತ್ತು. ಶನಿವಾರ ಮುಂಜಾನೆ ಬಂದು ಶಿಲಾನ್ಯಾಸದ ಹೊಂಡ ನೋಡಿದರೆ, ಅಲ್ಲೊಂದು ಆಮೆ ಕಾರ್ಯಕ್ರಮಕ್ಕೆ ಶುಭಕೋರುವಂತೆ ಕುಳಿತಿತ್ತು. ನೆರೆದಿದ್ದ ಭಕ್ತ ಸಮೂಹಕ್ಕೆ ಆಶ್ಚರ್ಯವೋ ಆಶ್ಚರ್ಯ. ದೇವ ನಿನ್ನ ಮಹಮೆಗೆ ಸಾಟಿಯುಂಟೇ ಎಂದು ಭಾವುಕರಾಗಿ ಭಕ್ತಿಯಲ್ಲಿ ತೊಡಗಿದರು.
ಕುದ್ಮಾರು ಗ್ರಾಮದ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ಕೇಪಳೇಶ್ವರ ದೇವರ ದೇವಸ್ಥಾನದಲ್ಲಿ ಶನಿವಾರ ಬೆಳಿಗ್ಗೆ 6.58ರಿಂದ 7.55ರ ನಡುವೆ ಶಿಲಾನ್ಯಾಸ ನೆರವೇರಿತು. ವಾಸ್ತುಶಿಲ್ಪಿ ಪ್ರಸಾದ ಮುನಿಯಂಗಳ ಮತ್ತು ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ವೈದಿಕ ವಿಧಿವಿಧಾನ ಜರಗಿತು.