ಪುತ್ತೂರು: ಹಿಂದೂ ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರ ಮಾಡಬೇಕಾದ್ದು ನಮ್ಮ ಕರ್ತವ್ಯವಾಗಿದ್ದು, ಇದಕ್ಕಾಗಿ ನಮ್ಮ ದುಡಿಮೆಯ ಒಂದು ಭಾಗವನ್ನು ಅರ್ಪಣೆ ಮಾಡಬೇಕು. ಹೀಗಾದಲ್ಲಿ ದೇವಸ್ಥಾನಗಳಿಗೆ ಚೈತನ್ಯ ಬರುವ ಜತೆಗೆ ನಮ್ಮ ಜೀವನವೂ ನೆಮ್ಮದಿಯಿಂದಿರಲು ಸಾಧ್ಯ ಎಂದು ಮಂಗಳೂರು ಕುಳಾಯಿ ಚಿತ್ರಾಪುರ ಮಠದ ಶ್ರೀ ವಿದ್ಯೆಂದ್ರ ತೀರ್ಥ ಶ್ರೀಪಾದಂಗಳವರು ನುಡಿದರು.
ಅವರು ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ಕೇಪಳೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು.
800 ವರ್ಷ ಇತಿಹಾಸ ಇರುವ ದೇವಸ್ಥಾನ
ಮಾಣಿಲ ಶ್ರೀಧಾಮ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿ, ಹಲವು ವರ್ಷಗಳ ಇತಿಹಾಸ ಇರುವ ಈ ದೇವಸ್ಥಾನದ ಜೀರ್ಣೋದ್ಧಾರದ ಮೂಲಕ ಅಭಿವೃದ್ಧಿಯಾಗುತ್ತಿದೆ. ಹಿಂದೂ ಸಮಾಜದ ಒಗ್ಗಟ್ಟಿನಿಂದ ಕೆಲಸ ಕಾರ್ಯಗಳು ನಡೆಯಲಿ ಎಂದು ಹಾರೈಸಿದರು.
ಮಾಚಿ ಸಚಿವ ಎಸ್.ಅಂಗಾರ ಮಾತನಾಡಿ, ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅಂದಾಜು 10 ಕೋಟಿ ಬೇಕಾಗಿದ್ದು, ಪ್ರತಿಯೊಬ್ಬ ಭಕ್ತರ ಕಾಣಿಕೆ ಹಾಗೂ ಬೈಲುವಾರು ಸಮಿತಿಯವರು ಸಂಗ್ರಹಣೆ ಮಾಡಿ ಜೀರ್ಣೋದ್ಧಾರ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವರು ಎಲ್ಲಿ ಇದ್ಧಾರೋ ಅಲ್ಲಿ ಅನಾರೋಗ್ಯ ಬರಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ಸೇರಿ ಕೈಜೋಡಿಸಿದಾಗ ಜೀರ್ಣೋದ್ಧಾರ ಕಾರ್ಯ ಯಶಸ್ವಿಯಾಗಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅಭಿವೃದ್ಧಿಗೆ 20 ಲೋಡ್ ಮರಳು ನೀಡಿದ ದಿನೇಶ್ ಮೆದು ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಲೋಹಿತಾಕ್ಷ ಕೆಡೆಂಜಿ, ತೇಜಾಕ್ಷಿ ಕೊಡಂಗೆ, ಭಾಸ್ಕರ ಭಟ್, ಅರ್ಚಕ ರಾಘವೇಂದ್ರ ಭಟ್ ಉಪಸ್ಥಿತರಿದ್ದರು. ಮೋಹನ್ ಗೌಡ ಇಡ್ಯಡ್ಕ ಸ್ವಾಗತಿಸಿದರು. ಅನಿಲ್ ಕಂಡಿಗ ವಂದಿಸಿದರು.