ಪುತ್ತೂರು: ವಿದ್ಯುತ್ ಬಿಲ್ ಫಿಕ್ಸೆಡ್ ಚಾರ್ಜ್ ದಿಢೀರ್ ಹೆಚ್ಚಳವಾಗಿದ್ದು ಮೇ ತಿಂಗಳ ಬಿಲ್ ನಲ್ಲಿ ನಿಗದಿತ ಶುಲ್ಕ ಏರಿಕೆ ಮಾಡಲಾಗಿದೆ. ಈ ಮೂಲಕ ವಿದ್ಯುತ್ ಗ್ರಾಹಕರಿಗೆ ಶಾಕ್ ಎದುರಾಗಿದೆ.
ಗೃಹ ಬಳಕೆ ವಿದ್ಯುತ್ ಸಂಪರ್ಕಕ್ಕೆ ಪ್ರತಿ ಕಿ.ವ್ಯಾ.ಗೆ 100 ರೂ. ಇದ್ದ ನಿಗದಿತ ಶುಲ್ಕ ಮೇ ತಿಂಗಳಿನಿಂದ ಅನ್ವಯವಾಗುವಂತೆ 110 ರೂ.ಗೆ ಹೆಚ್ಚಳ ಮಾಡಲಾಗಿದೆ. ಈಗಾಗಲೇ ಪ್ರತಿ ಯೂನಿಟ್ ಬೆಲೆ 70 ಪೈಸೆ ಹೆಚ್ಚಳವಾಗಿದ್ದು ಗಾಯದ ಮೇಲೆ ಬರೆ ಎಳೆದಂತೆ ಫಿಕ್ಸೆಡ್ ಚಾರ್ಜ್ ಕೂಡ ದಿಢೀರ್ ಆಗಿ ಏರಿಕೆಯಾಗಿದೆ. ಗೃಹಬಳಕೆ ಸಂಪರ್ಕಕ್ಕೆ 50 ಕಿ.ವ್ಯಾ.ವರೆಗೆ ಪ್ರತಿ ಕಿ.ವ್ಯಾ.ಗೆ 110 ರೂ. ನಿಗದಿತ ಶುಲ್ಕ ನಿಗದಿ ಮಾಡಲಾಗಿದೆ. 50 ಕೆ.ವಿ.ಮೇಲ್ಪಟ್ಟ ಬಳಕೆಗೆ ಪ್ರತಿ ಕೆ.ವಿ.ಗೆ 210 ರೂ. ಕಟ್ಟಬೇಕು.
ವಾಣಿಜ್ಯ ಬಳಕೆ ಸಂಪರ್ಕಗಳಿಗೆ ಪ್ರತಿ ಕಿ.ವ್ಯಾ.ಗೆ 125 ರೂ. ಇದ್ದ ದರ ಮೇ ತಿಂಗಳಿನಿಂದ 200 ರೂ.ಗೆ ಹೆಚ್ಚಳವಾಗಿದೆ. ವಾಣಿಜ್ಯ ಬಳಕೆ ಸಂಪರ್ಕಗಳಿಗೆ 50 ಕಿ.ವ್ಯಾ.ಮೇಲಿನ ಬಳಕೆಗೆ ಪ್ರತಿ ಕಿ.ವ್ಯಾ.ಗೆ 300 ರೂ. ನಿಗದಿ ಮಾಡಲಾಗಿದೆ.
‘ಗೃಹಜ್ಯೋತಿ’ ಯೋಜನೆಯ ಅಡಿಯಲ್ಲಿ ಫಿಕ್ಸೆಡ್ ಮೊತ್ತವೂ ಉಚಿತವಾಗಲಿದ್ದು, ಫಲಾನುಭವಿಗಳಿಗೆ ನಿಗದಿತ ಶುಲ್ಕ ಹೊರೆ ಇರುವುದಿಲ್ಲ. ‘ಗೃಹಜ್ಯೋತಿ’ ಫಲಾನುಭವಿಗಳ ಫಿಕ್ಸೆಡ್ ಚಾರ್ಜ್ ಸರಕಾರವೇ ಪಾವತಿಸಲಿದೆ.