ಪುತ್ತೂರು: ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ಡಯಾಲಿಸಿಸ್ ಕೇಂದ್ರವನ್ನು ಆರಂಭಿಸುವಂತೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ಗುಂಡೂರಾವ್ ರವರಿಗೆ ಮನವಿ ಮಾಡಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಸಚಿವರ ಬಳಿ ತೆರಳಿದ ಶಾಸಕರು ಸಚಿವರ ಜೊತೆ ಪುತ್ತೂರು ವಿಧಾನಸಭಾ ಕ್ಷೇತ್ರದ ವಿಚಾರಕ್ಕೆ ಸಂಬಂಧಿಸಿದಂತೆ ಸುದೀರ್ಘ ಮತುಕತೆ ನಡೆಸಿದರು. ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ಡಯಾಲಿಸ್ ಕೇಂದ್ರವನ್ನು ತಕ್ಷಣವೇ ಆರಂಭಿಸಬೇಕಿದೆ. ಕಡಬದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈಗಾಗಲೇ ಡಯಾಲಿಸಿಸ್ ಕೇಂದ್ರವನ್ನು ಆರಂಭ ಮಾಡಿ, ಮೂರು ಡಯಾಲಿಸಿಸ್ ಯಂತ್ರವನ್ನು ನೀಡಲಗಿದೆ. ಆದರೆ ಡಯಾಲಿಸಿಸ್ ಕೇಂದ್ರಕ್ಕೆ ಆರ್‌ವೊ ಪ್ಲಾಂಟ್ ಆಳವಡಿಸಿ ಸೂಕ್ತವಾದ ಸಿಬಂದಿಗಳ ನೇಮಕ ಮಾಡದೇ ಇರುವ ಕಾರಣ ಡಯಾಲಿಸಿಸ್ ಕೇಂದ್ರ ಕಾರ್ಯಚರಣೆಯಲ್ಲಿಲ್ಲ. ಸರಕಾರ ತಕ್ಷಣವೇ ಕಡಬ ಸಮುದಾಯ ಕೇಂದ್ರದಲ್ಲಿರುವ ಡಯಾಲಿಸಿಸ್ ಕೇಂದ್ರಕ್ಕೆ ಆರ್‌ವೊ ಮತ್ತು ಸಿಬಂದಿಗಳನ್ನು ನೇಮಕ ಮಾಡಿ ಕೇಂದ್ರವನ್ನು ಆರಂಭಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಕಡಬ
ತಾಲೂಕು ವ್ಯಾಪ್ತಿಯಲ್ಲಿನ ಜನರು ಡಯಾಲಿಸ್‌ಗಾಗಿ ೪೫ ಕಿ ಮೀರದ ಪುತ್ತೂರು ಅಥವಾ ಸುಳ್ಯಕ್ಕೆ ತೆರಳಿ ಡಯಾಲಿಸಿಸ್ ಮಾಡಬೇಕಾದ ಅನಿವಾರ್ಯತೆ ಇದ್ದು , ಸರದಿ ಸಾಲಿನಲ್ಲಿ ನಿಂತು ಡಯಾಲಿಸಿಸ್ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಶಾಸಕರು ಸಚಿವರ ಗಮನಕ್ಕೆ ತಂದರು. ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಡಯಾಲಿಸಿಸ್ ಕೇಂದ್ರವನ್ನು ತುರ್ತಾಗಿ ಆರಂಭಿಸುವಂತೆಯೂ ಮನವಿ ಮಾಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಟಿ ಕೆ ಅನಿಲ್‌ಕುಮಾರ್ ಅವರನ್ನೂ ಭೇಟಿಯಾಗಿ ಶಾಸಕರು ಮನವಿ ಸಲ್ಲಿಸಿದ್ದಾರೆ.