ಪುತ್ತೂರು: ಇಲ್ಲಿನ ಕೃಷ್ಣನಗರ ಅಲಂಬುಡದಲ್ಲಿ ನೂತನವಾಗಿ ಆರಂಭಗೊಂಡಿರುವ ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ ಜೂನ್ 5ರಂದು ನಡೆಯಿತು.
ತಾಳ್ಮೆಯಿಂದ ಮಕ್ಕಳನ್ನು ಬೆಳೆಸಬೇಕು: ಡಾ. ಸುಕುಮಾರ್ ಗೌಡ,ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿಕ್ಷಣ ತಜ್ಞ ಡಾ. ಸುಕುಮಾರ್ ಗೌಡ, ಮಕ್ಕಳನ್ನು ತಾಳ್ಮೆಯಿಂದ ಬೆಳೆಸಿ. ಆಗ ಮಕ್ಕಳು ಬೆಳೆಯುತ್ತಾರೆ ಎಂದ ಅವರು, ವಿದ್ಯಾಸಂಸ್ಥೆಯ ಸುತ್ತಲಿನ ಕಾಡನ್ನು ಇದೇ ರೀತಿ ಉಳಿಸುಕೊಳ್ಳಿ ಎಂದು ಕಿವಿಮಾತು ಹೇಳಿದರು.ಶಿಕ್ಷಣ ತಜ್ಞ ಎನಿಸಿಕೊಳ್ಳಲು ಕಾಳಜಿ ಇರಬೇಕು. ಆ ಕಾಳಜಿ ಎವಿ ನಾರಾಯಣ್ ಅವರಲ್ಲಿದೆ. ಓರ್ವ ಇಂಜಿನಿಯರ್ ಆಗಿ ಶಿಕ್ಷಣ ಸಂಸ್ಥೆಯನ್ನು ಕಟ್ಟಲು ಮುಂದೆ ಬಂದಿರುವ ಅವರ ಪ್ರಯತ್ನ ಶ್ಲಾಘನೀಯ ಎಂದರು.
ಮನೆಗಳಲ್ಲಿ ಧನಾತ್ಮಕ ಸಂದೇಶ ಸಿಗಲಿ: ದಿವಾಕರ ಆಚಾರ್ಯ
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ಉಪ್ಪಿನಂಗಡಿ ಸರಕಾರಿ ಪ್ರೌಢಶಾಲಾ ನಿವೃತ್ತ ಮುಖ್ಯಶಿಕ್ಷಕ ದಿವಾಕರ ಆಚಾರ್ಯ ಗೇರುಕಟ್ಟೆ ಮಾತನಾಡಿ, ಶಿಕ್ಷಣ ಸಂಸ್ಥೆ ಪ್ರಾರಂಭಿಸುವುದು ಕಷ್ಟದ ಕೆಲಸ. ಇಲ್ಲಿ ಲಾಭದ ಉದ್ದೇಶಕ್ಕಾಗಿ ಎವಿ ನಾರಾಯಣ್ ಅವರು ಈ ಸಂಸ್ಥೆಯನ್ನು ಪ್ರಾರಂಭ ಮಾಡಿಲ್ಲ. ಅವರ ಆಲೋಚನೆಗೆ ತಕ್ಕಂತೆ ಶಾಲಾ ಪರಿಸರವೂ ಚೆನ್ನಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ಇಲ್ಲಿನ ವಾತಾವರಣ ಪೂರಕವಾಗಿದೆ. ಪೋಷಕರ ಪ್ರೋತ್ಸಾಹವೂ ಸಿಕ್ಕಿದರೆ, ಖಂಡಿತಾ ಇಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು.
ಶಿಕ್ಷಣ ವ್ಯಾಪಾರೀಕರಣ ಆಗುವ ಸಂದರ್ಭ ನೋಡುತ್ತಿದ್ದೇವೆ. ಪೋಷಕರು ಹೆಚ್ಚು ಡೊನೇಷನ್ ನೀಡುವ ಶಾಲೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಡೊನೇಷನ್ ಕಟ್ಟಡದಿಂದ ಉತ್ತಮ ಶಿಕ್ಷಣ ಸಿಗಲು ಸಾಧ್ಯವಿಲ್ಲ. ಶಿಕ್ಷಕರು ಕಲಿಸುವ ಯಂತ್ರಗಳು, ವಿದ್ಯಾರ್ಥಿಗಳು ಕಲಿಯುವ ಯಂತ್ರಗಳು ಎನ್ನುವ ಧೋರಣೆ ಬದಲಾಗಬೇಕು. ಆಗ ಶಿಕ್ಷಣ ಸಂಸ್ಥೆ ದೇವಾಲಯವಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಬೆಳವಣಿಗೆ ಹೊಂದುತ್ತಾರೆ ಎಂದರು.
ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ. ಮನೆಯಲ್ಲಿ ಮಕ್ಕಳಿಗೆ ಧನಾತ್ಮಕ ಸಂದೇಶ ನೀಡುವ ಕೆಲಸ ಆಗಬೇಕು. ಋಣಾತ್ಮಕ ಸಂದೇಶವನ್ನು ವಿದ್ಯಾರ್ಥಿಗಳು ಪಡೆದುಕೊಂಡರೆ, ಅದು ಅವರ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮಗು ಶಾಲೆಯನ್ನು ಪ್ರೀತಿಸುವಂತೆ ಮಾಡಿ. ಆಗ ಕಲಿಕೆಯ ಮೇಲೆ ಪ್ರೀತಿ ಮೂಡುತ್ತದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕುಸುಮಾವತಿ ಮಾತನಾಡಿ, ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ಮಾತನಾಡಿ, ಯಾವುದೇ ವ್ಯಾವಹಾರಿಕ ಚಿಂತನೆಯನ್ನಿಟ್ಟುಕೊಂಡು ಈ ವಿದ್ಯಾಸಂಸ್ಥೆಯನ್ನು ಪ್ರಾರಂಭಿಸುತ್ತಿಲ್ಲ. ಇದು ಜಾತಿ, ಧರ್ಮ ಅಥವಾ ಯಾವುದೋ ಒಂದು ವಿಷಯಕ್ಕೆ ಸೀಮಿತವಾಗಿಲ್ಲ. ಎಲ್ಲರನ್ನು ಜೊತೆಗೂಡಿಸಿಕೊಂಡು, ಎಲ್ಲರ ಪ್ರೋತ್ಸಾಹ, ಸಹಕಾರ ಪಡೆದುಕೊಂಡು ಸಂಸ್ಥೆಯನ್ನು ಮುಂದುವರಿಸಿಕೊಂಡು ಹೋಗಲಾಗುವುದು ಎಂದರು.
ವಿಶ್ವ ಪರಿಸರ ದಿನದ ಅಂಗವಾಗಿ ಸಭಾ ವೇದಿಕೆಯ ಮುಂಭಾಗ ವಿದ್ಯಾರ್ಥಿಗಳ ಹೆಸರು ಬರೆದಿರುವ ಹೂಕುಂಡದಲ್ಲಿ ಗಿಡಗಳನ್ನು ಇಟ್ಟಿದ್ದು, ಅದಕ್ಕೆ ಪುಟಾಣಿಗಳು ನೀರೆರೆಯಲಾಯಿತು.ಇದೇ ಸಂದರ್ಭ ಎವಿ ನಾರಾಯಣ್ ಅವರ ಶಿಕ್ಷಕಿಯಾಗಿದ್ದ ಕುಸುಮಾವತಿ ಅವರನ್ನು ಸನ್ಮಾನಿಸಿ, ಗುರುವಂದನೆ ನೆರವೇರಿಸಲಾಯಿತು.
ದಿವಂಗತ ಆನಂದ ನಾಯ್ಕ ಅವರ ತಾಯಿಯನ್ನು ವೇದಿಕೆಗೆ ಆಹ್ವಾನಿಸಿ ಆರ್ಥಿಕ ನೆರವಿನ ಚೆಕ್ ಹಸ್ತಾಂತರಿಸಲಾಯಿತು. ಪ್ರಥಮ ದಾಖಲಾತಿ ಪಡೆದ ವಿದ್ಯಾರ್ಥಿನಿ ಅನಿಕಾ ಅವರನ್ನು ಗೌರವಿಸಲಾಯಿತು. ದಾನಿಗಳನ್ನು ಗೌರವಿಸಲಾಯಿತು.
ಸಂಸ್ಥೆ ಉಪಾಧ್ಯಕ್ಷ ಗುಡ್ಡಪ್ಪ ಬಲ್ಯ ಅತಿಥಿಗಳನ್ನು ಪರಿಚಯಿಸಿದರು. ಎವಿಜಿ ಎಜ್ಯುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎವಿ ನಾರಾಯಣ್ ಸ್ವಾಗತಿಸಿದರು. ಸಂಸ್ಥೆ ಉಪಾಧ್ಯಕ್ಷ ಉಮೇಶ್ ಮಳವೇಲು ವಂದಿಸಿದರು. ಮುಖ್ಯಗುರು ಉಷಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.