ಪುತ್ತೂರು: ಭ್ರಷ್ಟಾಚಾರ ಇಟ್ಟುಕೊಂಡು ಪುತ್ತೂರಿಗೆ ಬರುವ ಯಾವುದೇ ಅಧಿಕಾರಿಗಳು ಜನಸಾಮಾನ್ಯರಲ್ಲಿ ಹಣಕ್ಕಾಗಿ ಕೈಯೊಡ್ಡಿದರೆ ಅವರನ್ನು ಒಂದೇ ವಾರದಲ್ಲಿ ಇಲ್ಲಿಂದ ಎತ್ತಂಗಡಿ ಮಾಡುವ ಕೆಲಸ ಮಾಡಲಿದ್ದೇನೆ.
ಹೀಗೆಂದು ಹೇಳಿದರು ಪುತ್ತೂರು ವಿಧಾನಸಭಾ ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರಿನಲ್ಲಿ ಕಾಂಗ್ರೆಸ್ ವತಿಯಿಂದ ನಗರದ ಪುರಭವನದಲ್ಲಿ ಶನಿವಾರ ನಡೆದ ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಪುತ್ತೂರು ಕ್ಷೇತ್ರದಲ್ಲಿ ಯಾವುದೇ ಅಧಿಕಾರಿಗಳಿಂದ ನಾವು ಅಪೇಕ್ಷೆ ಪಡುವುದು ಬಡವರಿಗೆ ಸೇವೆ ನೀಡುವುದನ್ನು. ಅದನ್ನು ಬಿಟ್ಟು ಬಡವರನ್ನು, ಜನಸಾಮಾನ್ಯರ ಕೆಲಸಕ್ಕಾಗಿ ಅಲೆದಾಡಿಸುವ ಪ್ರವೃತ್ತಿ ಇಟ್ಟುಕೊಂಡರೆ ಅವರನ್ನು ತಕ್ಷಣ ಈ ಕ್ಷೇತ್ರದಿಂದ ಕಳುಹಿಸುವ ಕೆಲಸ ಮಾಡಲಾಗುವುದು ಎಂದು ಖಾರವಾಗಿ ಹೇಳಿದರು.

ಮುಂದಿನ ದಿನಗಳಲ್ಲಿ ಲೋಕಸಭೆ, ತಾಪಂ, ಜಿಲ್ಲಾ ಪಂ ಚುನಾವಣೆ ಬರಲಿದ್ದು, ಬೂತ್ ಮಟ್ಟದಿಂದಲೇ ಪಕ್ಷವನ್ನು ಕಟ್ಟಿ ಚುನಾವಣೆಯಲ್ಲಿ ಗೆಲುವು ಸಾಧಿಸುವ ಕಾರ್ಯಕ್ಕೆ ಈಗಿನಿಂದಲೇ ತೊಡಗಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತೀ ಬೂತ್ ಅಧ್ಯಕ್ಷರು ತಮ್ಮ ಜವಾಬ್ದಾರಿ ವಹಿಸಿಕೊಂಡು ಸರಕಾರ ಈಗಾಗಲೇ ನೀಡಿರುವ ಪಂಚ ಗ್ಯಾರಂಟಿಗಳನ್ನು ಜತೆಗೆ 94ಸಿ, 94ಸಿಸಿ, ಅಕ್ರಮ-ಸಕ್ರಮದಲ್ಲಿ ಯಾರಿಗೆಲ್ಲಾ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ ದರ ಬಗ್ಗೆ ಗಮನ ನೀಡಿ ಅರ್ಜಿಗಳನ್ನು ಪಡೆದು, ಸರಕಾರದ ಗ್ಯಾರಂಟಿಗಳನ್ನು ಪ್ರತೀ ಮನೆಗೆ ತಲುಪಿಸುವ ಕಾರ್ಯ ಭರದಿಂದ ಮಾಡಬೇಕಾಗಿದೆ. ಈ ಮೂಲಕ ಪಕ್ಷವನ್ನು ಬೂತ್ ಮಟ್ಟದಿಂದಲೇ ಭದ್ರವಾಗಿ ಕಟ್ಟಿ ಮುಂದಿನ 25 ವರ್ಷಗಳ ವರೆಗೂ ಕಾಂಗ್ರೆಸ್ ಆಡಳಿತದಲ್ಲಿರುವಂತೆ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದರು.
ಈಗಾಗಲೇ ಬಿಜೆಪಿಯವರು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ಸುಳ್ಳು ಹೇಳುವುದನ್ನು ಬಿಟ್ಟು ಅಭಿವೃದ್ಧಿಯಲ್ಲಿ ನಮ್ಮ ಜತೆ ಕೈಜೋಡಿಸಲಿ ಎಂದ ಅವರು, ಮುಂದಿನ ಮೂರು ವರ್ಷದೊಳಗೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಯಾರಿಗೂ ಕುಡಿಯುವ ನೀರಿನ ಕೊರತೆ ಕಂಡು ಬರಬಾರದು. ಈ ನಿಟ್ಟಿನಲ್ಲಿ 1400 ಕೋಟಿ ಕುಡಿಯುವ ನೀರಿನ ಕೊರತೆ ನೀಗಿಸಲು ವ್ಯಯಿಸಲಾಗುವುದು. ಜತೆಗೆ ಯುವಕರ ಮನಸ್ಸು ಬದಲಾಯಿಸಲು ಉದ್ಯೋಗ ಸೃಷ್ಟಿಗಾಗಿ ಪ್ರತೀ ವರ್ಷ ಉದ್ಯೋಗ ಮೇಳವನ್ನು ಪುತ್ತೂರಿನಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ ಅವರು, ಇಂದಿನ ಈ ಅಭಿನಂದನಾ ಸಭೆ ಚುನಾವಣೆ ಸಂದರ್ಭದಲ್ಲಿ ಬಿಸಿಲು, ಮಳೆ ಎನ್ನದೆ ತೊಡಗಿಸಿಕೊಂಡ ಕಾರ್ಯಕರ್ತ ಬಂಧುಗಳಿಗೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಕೆಪಿಸಿಸಿ ವಕ್ತಾರ ಕಾವು ಹೇಮನಾಥ ಶೆಟ್ಟಿ ಮಾತನಾಡಿ,
ಕಾಂಗ್ರೆಸ್ ಜಿಲ್ಲಾ ವಕ್ತಾರ ಮಹಮ್ಮದ್ ಬಡಗನ್ನೂರು ಮಾತನಾಡಿ, ಬಿಜೆಪಿ ಭದ್ರಕೋಟೆ ಎನ್ನಿಸಿರುವ ದ.ಕ. ಹಾಗೂ ಉಡುಪಿ ಜಿಲ್ಲೆಗಳು ಸೇರಿ ಕಾಂಗ್ರೆಸ್ ಎರಡು ಸ್ಥಾನಗಳನ್ನು ಗೆದ್ದಿದೆ. ಪುತ್ತೂರಿನಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಶಾಸಕರ ಆಯ್ಕೆಯಾಗಿ ಜನಸಾಮಾನ್ಯರ ಧ್ವನಿಯಾಗಬೇಕು ಎಂಬ ನಿಟ್ಟಿನಲ್ಲಿ ಎಲ್ಲಾ ನಾಯಕರು ಒಟ್ಟಾಗಿ ಕೆಲಸ ಮಾಡುವ ಯೋಜನೆ, ಯೋಜನೆ ಬೆಳೆಸಿಕೊಂಡಿದ್ದಾರೆ. ಇದರ ಫಲವಾಗಿ ಇಂದು ಅಶೋಕ್ ಕುಮಾರ್ ರೈ ಅವರು ಶಾಸಕರಾಗಿದ್ದು, ಮೊದಲ ಆಶ್ವಾಸನೆ ಎಂಬಂತೆ ಮೆಡಿಕಲ್ ಕಾಲೇಜು ಸ್ಥಾಪನೆಯ ಎಲ್ಲಾ ಚಟುವಟಿಕೆಗಳಿಗೆ ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿ, ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಮಾದರಿ ಶಾಸಕರಾಗಿ ಬೆಳೆದು ಬರಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾ ವಕ್ತಾರ ಮಹಮ್ಮದ್ ಬಡಗನ್ನೂರು ಮಾತನಾಡಿ, ಶಾಂತಿ-ಸೌಹಾರ್ದತೆಗೆ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರಬೇಕು ಎಂಬುದು ಜನರ ಆಶಯ ಇತ್ತು. ಅದು ಸಾಕಾರಗೊಂಡಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಎಂಬ ಬಿಜೆಪಿಯವರ ಕನಸಿಗೆ ತಿಲಾಂಜಲಿ ಹಾಕಲಾಗಿದೆ ಎಂದ ಅವರು, ಮುಂದಿನ 25 ವರ್ಷಗಳ ಸುದೀರ್ಘ ಪ್ರಯಾಣಕ್ಕೆ ಅಡಿಪಾಯ ಹಾಕಲು ಮುಂದಿ ಬಂದ ಧ್ರುವತಾರೆ ಅಶೋಕ್ ರೈ ಎಂದರು.
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ರಮೇಶ್ ರೈ ಡಿಂಬ್ರಿ ಹಾಗೂ ಗಿರಿಧರ ಅವರು ಶಾಸಕರಿಂದ ಪಕ್ಷದ ಬಾವುಟ ಪಡೆದುಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಶಾಸಕ ಅಶೋಕ್ ರೈಯವರನ್ನು ವಿವಿಧ ಸಂಘಟನೆ, ಕಾರ್ಯಕರ್ತರು, ಪ್ರಮುಖರು ಪೇಟ ತೊಡಿಸಿ, ಹೂಹಾರ ಹಾಕಿ, ಫಲಪುಷ್ಪ ನೀಡಿ ಅಭಿನಂದಿಸಿದರು.
ಸಭೆಯನ್ನುದ್ದೇಶಿಸಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ., ಜಿಪಂ ಮಾಜಿ ಸದಸ್ಯ ಎಂ.ಎಸ್.ಮಹಮ್ಮದ್ ಮಾತನಾಡಿದರು. ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಎನ್.ಸುಧಾಕರ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಫಝ್ಲಲ್ ರಹೀಮ್, ಮುರಳೀಧರ ರೈ ಮಠಂತಬೆಟ್ಟು, ಉಲ್ಲಾಸ್ ಕೋಟ್ಯಾನ್, ಪ್ರಸನ್ನ ಕುಮಾರ್ ಶೆಟ್ಟಿ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಕುಂಬ್ರ ದುರ್ಗಾಪ್ರಸಾದ್ ರೈ, ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ಅಲ್ಪಸಂಖ್ಯಾತ ಘಟಕದ ಶಕೂರ್ ಹಾಜಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಪಾಣಾಜೆ, ಸುಭಾಶ್ಚಂದ್ರ ಶೆಟ್ಟಿ, ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ, ಪ್ರಸಾದ್ ಕೌಶಲ್ ಶೆಟ್ಟಿ, ವೇದನಾಥ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಮಲ ರಾಮಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೇವಾದಳದ ಅಧ್ಯಕ್ಷ ಜೋಕಿಂ ಡಿ’ಸೋಜಾ ವಂದೇ ಮಾತರಂ ಹಾಡಿದರು. ಚುನಾವಣಾ ಏಜೆಂಟ್ ಭಾಸ್ಕರ ಕೋಡಿಂಬಾಳ ಸ್ವಾಗತಿಸಿದರು. ಸಿದ್ದಿಕ್ ಸುಲ್ತಾನ್ ಕಾರ್ಯಕ್ರಮ ನಿರೂಪಿಸಿದರು.