ಪುತ್ತೂರು: ನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಭಾರತೀಯ ಪರಂಪರಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಖ್ಯಾತ ಚಿಂತಕರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿ, ಪ್ರಪಂಚದ ಇತರೆ ದೇಶಗಳಿಗೆ ಹೋಲಿಸಿದಾಗ ನಮ್ಮ ದೇಶ ಅವಿಚ್ಛಿನ್ನವಾದ ಸಾಂಸೃತಿಕ ವೈಭವವನ್ನು ಹೊಂದಿದೆ. ರೋಮಾಂಚಕ ಇತಿಹಾಸ, ಶ್ರೀಮಂತ ಸಂಸ್ಕೃತಿ, ಅದ್ಭುತ ಸ್ಮಾರಕಗಳು ಮತ್ತು ಪರಂಪರೆಯನ್ನು ಹೊಂದಿರುವ ದೇಶ ಭಾರತ. ಸಿಂಧೂ ಬಯಲಿನ ನಾಗರಿಕತೆಯನ್ನು ನಾಗರಿಕತೆಗಳ ತೊಟ್ಟಿಲು ಎನ್ನುತ್ತಾರೆ. ಅದಕ್ಕೆ ತಕ್ಕಂತೆ ನಮ್ಮ ಭಾರತದ ಶ್ರೇಷ್ಠ ಪರಂಪರೆ ಬೆಳೆದುಬಂದಿದೆ ಎಂದು ಹೇಳಿದ ಅವರು, ಭಾರತವೆಂದರೆ ಅದು ಬರೇ ದೇಶವಲ್ಲ. ಜನ್ಮಭೂಮಿ, ಮಾತೃಭೂಮಿ, ಕರ್ಮಭೂಮಿ, ಪುಣ್ಯಭೂಮಿ, ತ್ಯಾಗಭೂಮಿ, ಯಾಗಭೂಮಿ, ಯೋಗಭೂಮಿ ನಮ್ಮ ಭಾರತ. ಹೀಗೆ ನಮ್ಮ ಭಾರತದ ಶ್ರೇಷ್ಠತೆ ಧೀಮಂತಿಕೆ ಅಪಾರವಾಗಿದೆ. ಎಲ್ಲರು ನಮ್ಮವರೆಂಬ ಶ್ರೇಷ್ಠ ಚಿಂತನೆ ಭಾರತೀಯರದ್ದು ಮಾತ್ರ ಎಂದರೆ ತಪ್ಪಲ್ಲ. ಅದನ್ನು ಇವತ್ತಿನ ಯುವಜನತೆ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಆ ಮೂಲಕ ಮತ್ತೊಮ್ಮೆ ಭಾರತದ ಶ್ರೇಷ್ಠತೆಯನ್ನು ವಿಶ್ವಕ್ಕೆ ತಿಳಿಸಬೇಕಾಗಿದೆ. ಅದಕ್ಕಾಗಿ ನಾವೆಲ್ಲರೂ ನಮ್ಮ ಭಾರತವನ್ನು ನಮ್ಮ ದೇಶವೆಂಬ ಪ್ರೇಮದೊಂದಿಗೆ ಪ್ರೀತಿಸೋಣ. ಎಂದರು.

ಅಧ್ಯಕ್ಷತೆವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಅಕ್ಷತಾ ಎ.ಪಿ. ಮಾತನಾಡಿ, ಪ್ರಜಾಪ್ರಭುತ್ವದ ರಾಷ್ಟ್ರೀಯತೆ, ಸಂವಿಧಾನದ ಪರಿಕಲ್ಪನೆ, ಸಮಾನತೆಯ ವಿಶಾಲ ಮನೋಭಾವ, ಏಕತೆ ಸಂಸ್ಕೃತಿಯ ಅಖಂಡತೆ, ದೇಶದ ಕುರಿತಾದ ಅಪಾರ ಅಭಿಮಾನವು ಭಾರತವನ್ನೇ ಸರ್ವಸ್ವವಾಗಿರಿಸಿದ ಸರ್ವ ಭಾರತೀಯರಲ್ಲೂ ತಾಯಿ ಭಾರತಿ ಜಾಗೃತಳಾಗಿದ್ದಾಳೆ. ವಿಶ್ವದ ಯಾವ ಭಾಗಗಳಲ್ಲಿಯೂ ಯಾವ ಮೂಲೆಗಳಲ್ಲಿಯೂ ಕಾಣ ಸಿಗದ ದೇಶಭಕ್ತಿ, ನಾಡು ನುಡಿಯ ಬಗೆಗಿನ ಪ್ರೀತಿ, ಸ್ಪಂದನೆ ಹಾಗೂ ಅಂತಃಕರಣ ಸೇವಾತತ್ಪರತೆಯ ವಿಶಾಲ ಮನೋಭಾವ ಕಾಣಿಸಲ್ಪಡುವುದೆಂದರೆ ಅದು ನಮ್ಮ ಭರತ ಭೂಮಿಯಲ್ಲಿ ಮಾತ್ರ ಎಂದ ಅವರು, ದೇವಾನುದೇವತೆಗಳು ಅವತರಿಸಿದ ಈ ಮಣ್ಣಿನಲ್ಲಿ ಭಾರತೀಯರು ವಿವಿಧತೆಯಲ್ಲಿ ಏಕತೆಯನ್ನು ಕಂಡು ಸರ್ವ ಧರ್ಮ ಸಹಿಷ್ಣುತೆಯಿಂದ ಬಾಳಿ “ವಸುಧೈವ ಕುಟುಂಬಕಂ’ ಎಂಬ ತತ್ತ್ವವನ್ನು ವಿಶ್ವಕ್ಕೆ ಸಾರಿ ಹೇಳಿದ್ದಾರೆ. ಅದನ್ನು ಉಳಿಸಿ, ಬೆಳೆಸುವ ಮಹತ್ತರವಾದ ಜವಾಬ್ದಾರಿ ಇಂದಿನ ವಿದ್ಯಾರ್ಥಿಗಳಿಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಭಾರತದ ಪರಂಪರೆಯನ್ನು ಅರಿತುಕೊಳ್ಳಿ ಎಂದರು.
ವೇದಿಕೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸಂಗೀತಾ ಎಸ್. ಎಂ., ಸಾಂಸ್ಕೃತಿಕ ಸಂಘದ ಸಂಯೋಜನಾಧಿಕಾರಿ ಡಾ. ರೇಖಾ, ಸಾಂಸ್ಕೃತಿಕ ಸಂಘದ ವಿದ್ಯಾರ್ಥಿ ನಾಯಕ ಕಮಲಾಕ್ಷ ಸ್ವಾಗತಿಸಿ, ವಿದ್ಯಾರ್ಥಿ ನಾಯಕಿ ಪೂಜಾ ಕೆ ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಅರ್ಪಿತಾ ಸದಾಶಿವ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಭಾರತೀಯ ಪರಂಪರೆಯನ್ನು ಸಾರುವ ವಿಶೇಷ ಸಾಂಸ್ಕೃತಿಕ ವೈಭವವನ್ನು ವಿದ್ಯಾರ್ಥಿಗಳು ಅನಾವರಣಗೊಳಿಸಿದರು.