ಬೆಳ್ತಂಗಡಿ: ರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರ್ತಿ ಸಾಲಿಯತ್ (23) ಹೃದಯಾಘಾತದಿಂದ ಮೇ 31ರಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು.
ಮೂಲತಃ ಪಡಂಗಡಿ ಪೊಯ್ಯೆಗುಡ್ಡೆ ನಿವಾಸಿಯಾಗಿರುವ ಇವರನ್ನು ಚಿಕ್ಕಮಗಳೂರಿಗೆ ವಿವಾಹ ಮಾಡಿಕೊಡಲಾಗಿತ್ತು. ಕೆಲ ದಿನಗಳಿಂದ ಹೃದಯ ನೋವಿನಿಂದ ಬಳಲುತ್ತಿದ್ದ ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮೃತಪಟ್ಟಿದ್ದಾರೆ.
ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಪಡೆದುಕೊಂಡಿದ್ದು, ಆ ಸಂದರ್ಭ ಸಾಲಿಯಾತ್ ಅವರು ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿಯಾಗಿ ಗಮನ ಸೆಳೆದಿದ್ದರು.
ಉತ್ತರಪ್ರದೇಶದ ಅಲಹಾಬಾದ್ ನಲ್ಲಿ ನಡೆದ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕರ್ನಾಟಕ ಸ್ಥಾನಕ್ಕೆ ದ್ವಿತೀಯ ಸ್ಥಾನ ಪಡೆದುಕೊಳ್ಳುವಲ್ಲಿ ಇವರ ಕೊಡುಗೆ ಅಪಾರ. ಪದವಿಯಲ್ಲಿದ್ದಾಗಲೇ ಕರ್ನಾಟಕ ರಾಜ್ಯದ ಬಹುಬೇಡಿಕೆಯ ವಾಲಿಬಾಲ್ ಆಟಗಾರ್ತಿಯಾಗಿ ಜನಮನ್ನಣೆ ಗಳಿಸಿದ್ದರು. ಉಜಿರೆ ಎಸ್.ಡಿ.ಎಂ. ದೈಹಿಕ ಶಿಕ್ಷಣ ನಿರ್ದೇಶಕ ರಮೇಶ್ ಅವರು ತರಬೇತಿ ನೀಡಿ, ಸಾಲಿಯತ್ ಅವರ ಪ್ರತಿಬೆಗೆ ಸೂಕ್ತ ಮನ್ನಣೆ ನೀಡಿದ್ದರು.
ರಾಷ್ಟ್ರ ಮಟ್ಟದ ವಾಲಿಬಾಲ್ ನಲ್ಲಿ ಬೆಳ್ಳಿ ಪದಕ, ಸೀನಿಯರ್ ನ್ಯಾಷನಲ್ ದಕ್ಷಣ ವಲಯದಲ್ಲಿ ಚಿನ್ನದ ಪದಕ, ಜ್ಯೂನಿಯರ್ ನ್ಯಾಷನಲ್ ನಲ್ಲಿ ತೃತೀಯ ಸ್ಥಾನ ಮೊದಲಾದ ಸಾಧನೆಗಳನ್ನು ಮೆರೆದಿದ್ದರು. ಸಾಲಿಯತ್ ಅವರ ಸಾಧನೆಯನ್ನು ಮೆಚ್ಚಿ ಧರ್ಮಸ್ಥಳ ಧರ್ಮಾಧಿಕಾರಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಗೌರವಿಸಿ, ಪ್ರಶಂಸಿಸಿದ್ದರು. ಮೃತರು ತಂದೆ, ತಾಯಿ, ಸಹೋದರಿ, ಪತಿಯನ್ನು ಅಗಲಿದ್ದಾರೆ.