ಪುತ್ತೂರು: ದಶಕಗಳ ಹಿಂದೆ ಕ್ರೀಡಾಕ್ಷೇತ್ರದಲ್ಲಿ ಭಾರತದ ಪ್ರದರ್ಶನ ನೀರಸವಾಗಿರುತ್ತಿತ್ತು. ಅಲ್ಲೋ ಇಲ್ಲೋ ಒಬ್ಬ ಕ್ರೀಡಾಪಟು ಮೂರು – ನಾಲ್ಕನೇ ಸ್ಥಾನ ಗಳಿಸುವುದೇ ದೊಡ್ಡ ಸಾಧನೆ ಎನಿಸುತ್ತಿತ್ತು. ಆದರೆ ಈಗ ಚಿತ್ರಣ ಬದಲಾಗುತ್ತಿದೆ. ಒಲಿಂಪಿಕ್ಸ್ ನಂತಹ ಸ್ಪರ್ಧೆಗಳಲ್ಲೂ ನಿರಂತರವಾಗಿ ಚಿನ್ನ, ಬೆಳ್ಳಿ ಪದಕಗಳು ಭಾರತಕ್ಕೆ ಬರಲಾರಂಭಿಸಿವೆ. ಹಾಗಾಗಿ ನಮ್ಮ ಕ್ರೀಡಾಳುಗಳು ದೇಶಕ್ಕೆ ಹೆಮ್ಮೆ ತರುವ ಕಾರ್ಯ ಮಾಡುತ್ತಿದ್ದಾರೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸದಸ್ಯ ಸುರೇಶ ಶೆಟ್ಟಿ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾಕೂಟವನ್ನು ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಪ್ರಪಂಚದ ಇತರ ಕೆಲವು ರಾಷ್ಟ್ರಗಳಿಗೆ ಹೋಲಿಸುವಾಗ ನಮ್ಮ ಕ್ರೀಡಾಳುಗಳಿಗೆ ದೊರೆಯುತ್ತಿರುವ ಪದಕಗಳ ಸಂಖ್ಯೆ ಕಡಿಮೆ ಎನಿಸುವುದು ಸಹಜ. ಆದರೆ ಈಗ ಪದಕ ಗೆಲ್ಲುವ ಪರಿಪಾಠ ಆರಂಭವಾಗಿದೆ ಎನ್ನುವುದೇ ಖುಷಿಕೊಡುವ ವಿಚಾರ. ಕ್ರೀಡೆಯ ಬಗೆಗೆ ನಮ್ಮ ದೇಶದಲ್ಲಿ ಈಗ ಒಡಮೂಡುತ್ತಿರುವ ಜಾಗೃತಿ ಮುಂದೊಂದು ದಿನ ಅಪಾರ ಪದಕಗಳಿಗೆ ಭಾರತ ಭಾಜನವಾಗುವ ಸಂದರ್ಭವನ್ನು ಸಾಕಾರಗೊಳಿಸಲಿದೆ. ಅಂತಹ ದಿನದ ನಿರೂಪಿಸುವಿಕೆಗಾಗಿ ವಿದ್ಯಾರ್ಥಿಗಳು ತಯಾರಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಕೆಲವು ವಿದ್ಯಾರ್ಥಿ ಇಂದು ದೈಹಿಕ ಚಟುವಟಿಕೆಗಳ ಬಗೆಗೆ ಆಸಕ್ತಿ ಕಡಿಮೆಯಾಗುತ್ತಿದೆ. ಬಿಸಿಲಿನಲ್ಲಿ ಕ್ರೀಡಾಚಟುವಟಿಕೆಗಳಲ್ಲಿ ತೊಡಗಬೇಕೆಂಬುದು ಕಿರಿಕಿರಿಯೆನಿಸುತ್ತಿದೆ. ಆದರೆ ಅಂತಹ ಚಟುವಟಿಕೆಗಳಿಂದ ದೈಹಿಕವಾಗಿ ಸದೃಢರಾಗಿರಲು ಸಾಧ್ಯ. ಆರೋಗ್ಯವಂತ ಯುವಜನರಿಂದ ಮಾತ್ರ ದೇಶದ ಬದಲಾವಣೆ ನಿರೀಕ್ಷೆ ಮಾಡಬಹುದು ಎಂದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಕುಂಬ್ರದ ಸರ್ಕಾರಿ ಪ್ರೌಢಶಾಲೆಯ ವಿಶ್ರಾಂತ ದೈಹಿಕ ಶಿಕ್ಷಣ ನಿರ್ದೇಶಕ ವಿಶ್ವೇಶ್ವರ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಮಹಿಮಾ ಹೆಗಡೆ ಮತ್ತು ಅಂಕಿತ ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ. ವಂದಿಸಿದರು. ಕಾಲೇಜಿನ ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಕಾರ್ಯಕ್ರಮ ನಿರೂಪಿಸಿದರು.