ಪುತ್ತೂರು: ಬಿ.ಸಿ.ರೋಡ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸವಿತಾ ಸೌಹಾರ್ದ ಸಹಕಾರಿ ನಿಯಮಿತದ ಮೂರನೇ ಶಾಖೆ ಹಾಗೂ ಸೌಂದರ್ಯ ವರ್ಧಕ ಉತ್ಪನ್ನಗಳ ಮಾರಾಟ ಮಳಿಗೆ ಪುತ್ತೂರಿನ ಶಿವ ಆರ್ಕೇಡ್ ನ ಒಂದನೇ ಮಹಡಿಯಲ್ಲಿ ಮಂಗಳವಾರ ಶುಭಾರಂಭಗೊಂಡಿತು.
ಪುತ್ತೂರು ಸರಸ್ವತಿ ಕ್ರಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಸಹಕಾರಿ ಕ್ಷೇತ್ರದ ಕಾಶಿ ಪುತ್ತೂರು. ಸಹಕಾರಿ ಕ್ಷೇತ್ರ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಅವಿನಾಭಾವ ಸಂಬಂಧವಿದ್ದು, ಸಹಕಾರಿ ಕ್ಷೇತ್ರ ತನ್ನದೇ ಆದ ಛಾಪು ಮೂಡಿಸಿದೆ. ಇದೀಗ ಸವಿತಾ ಸಮಾಜ ಸಹಕಾರಿ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ತನ್ನ ಸಮಾಜದ ಕನಸು ನನಸು ಮಾಡಲು ಜಿಲ್ಲೆಯ ಹಲವು ತಾಲೂಕುಗಳಲ್ಲಿ ಶಾಖೆಗಳನ್ನು ತೆರೆಯಲು ಆರಂಭಿಸಿದೆ. ಈ ಮೂಲಕ ಸೌಂದರ್ಯ ವರ್ಧಕ ಮಳಿಗೆಗಳನ್ನು ತೆರೆದು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಖೆಗಳನ್ನು ತೆರೆಯುವ ಮೂಲಕ ಸಮಾಜದ ಅಭಿವೃದ್ಧಿಗೆ ಕಾರಣವಾಗಲಿ ಎಂದರು.
ಎಸ್‍ಸಿಡಿಸಿಸಿ ಬ್ಯಾಂಕ್ ನಿವೃತ್ತ ಡಿಜಿಎಂ ಉಗ್ಗಪ್ಪ ಶೆಟ್ಟಿ ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿ, ಪ್ರಾಮಾಣಿಕ, ಪಾರದರ್ಶಕತೆ ಇದ್ದಲ್ಲಿ ಯಾವುದೇ ಕ್ಷೇತ್ರ ಯಶಸ್ವಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಸವಿತಾ ಸಮಾಜ ಸೌಹಾರ್ದ ಸಹಕಾರಿ ಸಂಘವನ್ನು ತೆರೆದು ಸಮಾಜವಲ್ಲದೆ ಇತರ ಸಮಾಜದವರಿಗೆ ಆರ್ಥಿಕವಾಗಿ ಸಹಕಾರ ನೀಡುತ್ತಿದ್ದು, ಸಹಕಾರಿಯ ಬೆಳವಣಿಗೆಗೆ ಕಾರಣಕರ್ತವಾಗಿದೆ. ಸಹಕಾರಿ ಇನ್ನಷ್ಟು ಬೆಳೆದು ಸಮಾಜದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಲಿ ಎಂದರು.
ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಆನಂದ ಭಂಡಾರಿ ಹೊಸಬೆಟ್ಟು, ತಾಲೂಕು ಸವಿತಾ ಸಮಾಜದ ಅಧ್ಯಕ್ಷ ರಮೇಶ್ ಮುರ, ತಾಲೂಕು ಭಂಡಾರಿ ಸಮಾಜದ ಅಧ್ಯಕ್ಷ ಗಿರೀಶ್ ಕುಮಾರ್, ರುಡ್ ಸೆಟ್ ನ ಗೆಸ್ಟ್ ಫ್ಯಾಕಲ್ಟಿ ಮಾಧವಿ ಮನೋಹರ್ ರೈ ಶುಭ ಹಾರೈಸಿದರು. ಸವಿತಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ದಿನೇಶ್ ಎಲ್. ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಸಂಘದ ಉಪಾಧ್ಯಕ್ಷ ಸುರೇಶ್ ನಂದೊಟ್ಟು, ನಿರ್ದೇಶಕರಾದ ದಿನೇಶ್ ಎಲ್. ಬಂಗೇರ ಬೈಕಂಪಾಡಿ, ಆನಂದ ಭಂಡಾರಿ ಗುಂಡದಡೆ, ರವೀಂದ್ರ ಭಂಡಾರಿ ಕೃಷ್ಣಾಪುರ, ಮೋಹನ ಭಂಡಾರಿ ಪ್ಯೊತಾಜೆ, ಭುಜಂಗ ಸಾಲಿಯಾನ್ ಬಿ.ಸಿ.ರೋಡು, ಪದ್ಮನಾಭ ಭಂಡಾರಿ ಸುಳ್ಯ, ಎಸ್.ರವಿ ಮಡಂತ್ಯಾರು, ವಸಂತ ಎಂ. ಬೆಳ್ಳೂರು, ಆಶಾ ಕಂದಾವರ, ಸುಮಲತ ಸುರೇಂದ್ರ ಪುತ್ತೂರು ಉಪಸ್ಥಿತರಿದ್ದರು. ಪ್ರತೀಕ್ಷಾ ತಾರಿಗುಡ್ಡೆ ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಶನ್ ಎನ್. ಸ್ವಾಗತಿಸಿದರು. ಕಿರಣ್ ಸರಪಾಡಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಪ್ರಥಮ ಠೇವಣಿ ಪತ್ರವನ್ನು ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ್ ವಿತರಿಸಿದರು.