ಪುತ್ತೂರು: ಸೂಕ್ತ ಆಯ್ಕೆ ಹಾಗೂ ನಿರಂತರ ಪರಿಶ್ರಮ ಯಶಸ್ಸಿಗೆ ದಾರಿ ಎಂದು ಅಂತಾರಾಷ್ಟ್ರೀಯ ಮಟ್ಟದ ಆರ್ಯಭಟ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಣೇಶ್ ಕುಲಾಲ್ ಮಾಣಿಲ ಹೇಳಿದರು.
ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ ಪ್ರಸಕ್ತ ಸಾಲಿನ 10ನೇ ತರಗತಿಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾದ 13 ವಿದ್ಯಾರ್ಥಿಗಳಿಗೆ ತಲಾ 2000 ರೂ ನಗದು ಪುರಸ್ಕಾರ ವಿತರಿಸಿ ಅವರು ಮಾತನಾಡಿದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಶಾಲಾಭಿವೃದ್ಧಿಗೆ ಪ್ರೋತ್ಸಾಹ ನೀಡಿದ್ದ ಇವರು ತನ್ನ ಭರವಸೆಯಂತೆ ಡಿಸ್ಟಿಂಕ್ಷನ್ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ ನಗದು ಪ್ರೋತ್ಸಾಹಧನ ವಿತರಿಸಿದರು.

ಈ ಸಂದರ್ಭದಲ್ಲಿ ಪ್ರತಿಷ್ಠಿತ ಅಂತರಾಷ್ಟ್ರೀಯ ಆರ್ಯಭಟ ಪುರಸ್ಕಾರಕ್ಕೆ ಭಾಜನರಾಗಿ ಮಾಣಿಲಕ್ಕೆ ಕೀರ್ತಿ ತಂದ ಅವರನ್ನು ಶಾಲಾ ಪರವಾಗಿ ಅಭಿನಂದಿಸಲಾಯಿತು.
ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಶಿವಪ್ರಸಾದ್ ಸೊರಂಪಳ್ಳ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ವಿಷ್ಣು ಕನ್ನಡ ಗುಳಿ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಾ ಗಣೇಶ್ ಕುಲಾಲ್ ಮಾಣಿಲ ಅವರ ಸಮಾಜ ಸೇವೆಯನ್ನು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂ ಅಧ್ಯಕ್ಷೆ ವನಿತಾ, ಸುಬ್ರಹ್ಮಣ್ಯ ಭಟ್ ಕೆ ಜಿ, ಮುಖ್ಯ ಶಿಕ್ಷಕ ಭುವನೇಶ್ವರ್ ಸಿ, ಎಸ್ ಡಿ ಎಂ ಸಿ ಸದಸ್ಯರಾದ ಚಂದ್ರಶೇಖರ ರಾವ್ ಕೊಮ್ಮುಂಜೆ , ಗೋವಿಂದ ನಾಯ್ಕ, ಹಾಗೂ ಶಿಕ್ಷಕ ವರ್ಗ ದವರು ಭಾಗವಹಿಸಿದ್ದರು. ದೈ.ಶಿ.ಶಿಕ್ಷಕರಾದ ಉಮಾನಾಥ ರೈ ಮೇರಾವು ವಂದಿಸಿದರು. ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳು , ಪೋಷಕ ವರ್ಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.