ಕಾಸರಗೋಡು: ಕರ್ನಾಟಕಕ್ಕೆ ಸಾಗಿಸಲು ಕಾಸರಗೋಡಿನಲ್ಲಿ ದಾಸ್ತಾನು ಇಟ್ಟಿದ್ದ ಭಾರೀ ಪ್ರಮಾಣದ ಸ್ಫೋಟಕಗಳನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿ ಮಹಮ್ಮದ್ ಮುಸ್ತಫಾ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ, 7 ಸಾವಿರ ಡಿಟೋನೇಟರ್‌ಗಳು, 2,800 ಜಿಲೆಟಿನ್ ಕಡ್ಡಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಧಿಕಾರಿಗಳು ದಿನನಿತ್ಯದಂತೆ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಹಮ್ಮದ್ ಮುಸ್ತಫಾ ಎಂಬವನ ವಾಹನದಲ್ಲಿ ಸ್ಫೋಟಕ ಸಾಮಗ್ರಿಗಳು ಪತ್ತೆಯಾಗಿವೆ. ನಂತರ ಅವನ ಮನೆಗೆ ತೆರಳಿದಾಗ ಅಲ್ಲಿ ಅಪಾರ ಪ್ರಮಾಣದಲ್ಲಿ ಸ್ಫೋಟಕ ವಸ್ತು ದಾಸ್ತಾನು ಇಟ್ಟಿರುವುದು ಕಂಡುಬಂದಿದೆ.
ಮನೆಯಲ್ಲಿ ಮುಸ್ತಾಫ ಶೌಚಾಲಯಕ್ಕೆ ಹೋದವ ಬಹಳ ಹೊತ್ತಾದರೂ ಹೊರಬರಲಿಲ್ಲ. ಅಧಿಕಾರಿಗಳು ಬಾಗಿಲು ಒಡೆದು ನೋಡಿದಾಗ ಆತ ತನ್ನ ಅಂಗೈ ಕಡಿದುಕೊಂಡಿರುವುದು ಕಂಡುಬಂದಿದೆ. ಕೂಡಲೇ ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.
ನಂತರ ವಿಚಾರಣೆಗೆ ಒಳಪಡಿಸಿದಾಗ, ಕರ್ನಾಟಕದ ಕ್ವಾರಿ ಮಾಲೀಕರಿಗೆ ಸರಬರಾಜು ಮಾಡಲು ಈ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿದ್ದಾಗಿ ಮುಸ್ತಾಫ ಹೇಳಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.