ಕಡಬ: ವ್ಯವಹಾರಿಕ ದೃಷಿಕೋನದಿಂದ ಆಂಗ್ಲ ಮಾಧ್ಯಮ ಶಿಕ್ಷಣ ಅಗತ್ಯವಾಗಿದೆ ಎಂದು ನಂಬಿರುವ ಕಾಲಘಟ್ಟದಲ್ಲಿ ಶಿಕ್ಷಣದೊಂದಿಗೆ ಭಾರತೀಯ ಸಂಸ್ಕಾರ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು. ಭಾರತೀಯತೆಯ ಮೂಲ ತತ್ತ್ವವನ್ನು ಉಳಿಸಿಕೊಂಡು ಸಮಾಜದ ಪ್ರಗತಿಯ ವೇಗಕ್ಕೆ ತಕ್ಕಂತೆ ಮಕ್ಕಳಿಗೆ ಶಿಕ್ಷಣವನ್ನು ನೀಡುವುದು ಶಿಕ್ಷಣ ಸಂಸ್ಥೆಗಳ ಜವಬ್ದಾರಿಯಾಗಿದೆ ಎಂದು ಮಂಗಳೂರು ಶಾರದಾ ಗ್ರೂಪ್ ಆಫ್ ಇನ್ಸ್ಸ್ಟಿಟ್ಯೂಷನ್ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್ ಹೇಳಿದರು.
ಆಲಂಕಾರು ಗ್ರಾಮದ ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ರಿಂದ 8ನೇ ತರಗತಿಯವರೆಗಿನ ಆಂಗ್ಲ ಮಾಧ್ಯಮ ಶಿಕ್ಷಣ ತರಗತಿ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕಾರ್ ಭಟ್ ಕಲ್ಲಡ್ಕ ಮಾತನಾಡಿ, ಋಷಿ ಮುನಿಗಳ ಪರಂಪರೆಯಿಂದ ಹುಟ್ಟಿಕೊಂಡ ಹಿಂದೂ ಧರ್ಮದ ಆಚಾರ ವಿಚಾರಗಳಲ್ಲಿ ವಿಜ್ಞಾನ ಅಡಕವಾಗಿದೆ. ವಿಶ್ವದ ಎಲ್ಲಾ ವಿಜ್ಞಾನಿಗಳ ಸಂಶೋಧನೆಗಳ ಮೂಲ ಕೇಂದ್ರ ಭಾರತವಾಗಿದೆ. ಇದನ್ನು ಇತಿಹಾಸದಿಂದ ತಿಳಿದುಕೊಳ್ಳಬಹುದು. ಸಂಸ್ಕಾರಕ್ಕೆ ಮೂಲವಾಗಿರುವ ಭಾರತೀಯತೆಯನ್ನು ಉಳಿಸಿಕೊಂಡು ಆಂಗ್ಲ ಮಾಧ್ಯಮ ಶಿಕ್ಷಣವನ್ನು ನೀಡಲಾಗುವುದು ಎಂದರು.
ಮಂಗಳೂರಿನ ಉದ್ಯಮಿ ಸುನಿಲ್ ಆಚಾರ್ ಅವರು ಶಾಲಾ ಮ್ಯಾನೆಜ್‌ಮೆಂಟ್ ಸಾಫ್ಟ್ವೇರ್ ಅನಾವರಣ ಹಾಗೂ ಶಾಲಾ ಕ್ಯೂ ಆರ್ ಕೋಡ್ ಬಿಡುಗಡೆಗೊಳಿಸಿ ಶುಭಹಾರೈಸಿದರು. ಪ್ರಮುಖರಾದ ಪ್ರಕಾಶಿನಿ ವಿ. ಶೆಟ್ಟಿ ಮರುವಂತಿಲ ಪ್ರಾಜೆಕ್ಟರ್ ಉದ್ಘಾಟಿಸಿದರು.
ಶಾಲಾ ಆಡಳಿತ ಮಂಡಳಿ ಗೌರವಾಧ್ಯಕ್ಷ ಕೃಷ್ಣ ಕುಮಾರ್ ಅತ್ರಿಜಾಲು, ಕಾರ್ಯದರ್ಶಿ ಇಂದುಶೇಖರ ಶೆಟ್ಟಿ, ಕೋಶಾಧಿಕಾರಿ ರಾಮಚಂದ್ರ ಭಟ್ ಅತ್ರಿವನ, ಉಪಾಧ್ಯಕ್ಷ ಈಶ್ವರ ಗೌಡ ಪಜ್ಜಡ್ಕ, ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯಶಿಕ್ಷಕಿ ಆಶಾ ಎಸ್. ರೈ ಮೊದಲಾದವರು ಉಪಸ್ಥಿತರಿದ್ದರು.
ಬೆಳಿಗ್ಗೆ ಗಣಹೋಮ ನಡೆಯಿತು. ಈ ಸಂದರ್ಭ ಸುಳ್ಯ ಶಾಸಕಿ ಭಾಗಿರಥಿ ಮುರುಳ್ಯ ಉಪಸ್ಥಿತರಿದ್ದರು. ಮೂವರು ವಿದ್ಯಾರ್ಥಿಗಳನ್ನು ದತ್ತು ಪಡೆದು ಶಿಕ್ಷಣ ನೀಡುವ ಜವಾಬ್ದಾರಿ ಹೊತ್ತ ಸಾಮಾಜಿಕ ಮುಂದಾಳು ತಿಮ್ಮಪ್ಪ ಗೌಡ ಕುಂಡಡ್ಕ ಅವರು ಧನ ಸಹಾಯದ ಚೆಕ್ಕನ್ನು ಶಾಲಾ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ. ಸುರೇಶ್ ಕುಮಾರ್ ಕುಡೂರು ಸ್ವಾಗತಿಸಿದರು. ಸಂಚಾಲಕ ಗಂಗಾಧರ ಗೌಡ ಕುಂಡಡ್ಕ ಪ್ರಸ್ತಾವಿಸಿದರು. ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಸ್ಥ ಸತೀಶ್ ಜಿ.ಆರ್. ವಂದಿಸಿದರು. ಶಿಕ್ಷಕ ಚಂದ್ರಹಾಸ ಕೆ.ಸಿ. ಕಾರ್ಯಕ್ರಮ ನಿರೂಪಿಸಿದರು.