ಹೊಸದಿಲ್ಲಿ : ಮಣಿಪುರದಲ್ಲಿ ಹಿಂಸಾಚಾರ ನಡೆಸುತ್ತಿರುವ ಕುಕಿ ಉಗ್ರರನ್ನು ನಿಗ್ರಹಿಸಲು ಅಲ್ಲಿನ ಪೊಲೀಸ್ ಪಡೆಯ ಕಮಾಂಡೋಗಳು ಉಗ್ರ ಕಾರ್ಯಾಚರಣೆ ನಡೆಸಿದ್ದಾರೆ. ಭಾನುವಾರ ಬೆಳಗ್ಗಿನಿಂದ ಮಣಿಪುರದ ವಿವಿಧೆಡೆ ಕಮಾಂಡೊಗಳು ಸಾಕಷ್ಟು ದಂಗೆಕೋರರನ್ನು ಹತ್ಯೆಗೈಯುವಲ್ಲಿ ಸಫಲರಾಗಿದ್ದಾರೆ. ಸುಮಾರು 40 ಉಗ್ರರನ್ನು ಹತ್ಯೆಗೈಯ್ಯಲಾಗಿದೆ ಎಂದು ಮಣಿಪುರದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ತಿಳಿಸಿದ್ದಾರೆ.
ಈ ಉಗ್ರರು ಎಂ-16 ಮತ್ತು ಎಕೆ-47 ರೈಫಲ್ಗಳು ಮತ್ತು ಸ್ನೈಪರ್ ಗನ್ಗಳನ್ನು ಜನಸಾಮಾನ್ಯರ ಮೇಲೆ ಉಪಯೋಗಿಸುತ್ತಿದ್ದಾರೆ. ಹಳ್ಳಿಗಳಿಗೆ ಹೋಗಿ ಮನೆಗಳನ್ನು ಸುಟ್ಟುಹಾಕುತ್ತಿದ್ದಾರೆ. ನಮ್ಮ ಸೇನೆ ಮತ್ತು ಭದ್ರತಾ ಪಡೆಗಳ ಸಹಾಯದಿಂದ ಈ ಉಗ್ರರ ಮೇಲೆ ಕಠಿಣ ಕ್ರಮ ಜರುಗಿಸುತ್ತಿದ್ದೇವೆ. 40 ಮಂದಿ ಉಗ್ರರನ್ನು ಸಂಹರಿಸಲಾಗಿರುವ ಬಗ್ಗೆ ನಮಗೆ ವರದಿಗಳು ಬಂದಿವೆ ಎಂದು ಬಿರೇನ್ ಸಿಂಗ್ ಮಾಹಿತಿ ನೀಡಿದ್ದಾರೆ.
ಮಣಿಪುರದ ಇಂಫಾಲ್ ಕಣಿವೆ ಪ್ರದೇಶದ ಸುತ್ತಲಿನ ಸೆಕ್ಮಾಯ್, ಸುಗ್ನು, ಕುಂಬಿ, ಫಯೆಂಗ್ ಮತ್ತು ಸೆರೌ ಈ ಐದು ಪ್ರದೇಶಗಳ ಮೇಲೆ ಬಂಡುಕೋರರು ರಾತ್ರಿ 2ರ ವೇಳೆಯಲ್ಲಿ ಏಕಕಾಲದಲ್ಲಿ ದಾಳಿ ಆರಂಭಿಸಿದ್ದರು. ಈ ವೇಳೆ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿವೆ. ಈಗಲೂ ಕೂಡ ಇಲ್ಲಿ ಗುಂಡಿನ ಕಾಳಗ ಮುಂದುವರಿದಿದೆ. ಸಾಕಷ್ಟು ಮಂದಿ ಸಾವನ್ನಪ್ಪಿದ್ದಾರೆ. ಮುಂಜಾನೆ 2 ಗಂಟೆಗೆ ಬಂಡುಕೋರರು ಇಂಫಾಲ್ ಕಣಿವೆ ಮತ್ತು ಸುತ್ತಮುತ್ತಲಿನ ಐದು ಪ್ರದೇಶಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಭಧ್ರತಾ ಪಡೆಗಳು ಪ್ರತಿದಾಳಿ ನಡೆಸಿವೆ. ಗುಂಡಿನ ಚಕಮಕಿಗಳು ನಡೆಯುತ್ತಿದ್ದು, ಬೀದಿ ಬೀದಿಗಳಲ್ಲಿ ಶವಗಳು ಬಿದ್ದಿವೆ ಎಂದು ಮೂಲಗಳು ತಿಳಿಸಿವೆ. ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೀಟೈ ಸಮುದಾಯದ ಬೇಡಿಕೆ ವಿರುದ್ಧ ಪ್ರತಿಭಟಿಸಲು ಮೇ 3 ರಂದು ಬೆಟ್ಟದ ಜಿಲ್ಲೆಗಳಲ್ಲಿ ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ ಆಯೋಜಿಸಿದ ನಂತರ ಮಣಿಪುರದಲ್ಲಿ ಜನಾಂಗೀಯ ಘರ್ಷಣೆ ಆರಂಭವಾಗಿದೆ. ಮಣಿಪುರ ಹಿಂಸಾಚಾರದಲ್ಲಿ ಇದುವರೆಗೂ 75ಕ್ಕೂ ಹೆಚ್ಚು ಜೀವಗಳು ಬಲಿಯಾಗಿವೆ.