ಪುತ್ತೂರು: ನಾನು ತುಂಬಾ ನಿರೀಕ್ಷೆಯಿಟ್ಟು ಶಾಸಕನಾಗಿ ಬಂದಿದ್ದು, ಸರಕಾರಿ ಸೇವೆಯಲ್ಲಿ ಸ್ಪಂದನೆ ನೀಡುವುದು ನನ್ನ ಕರ್ತವ್ಯವಾಗಿದೆ.. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ, ಬಡವರಿಗೆ ಒಳ್ಳೆಯ ಸೇವೆ ನೀಡುವಲ್ಲಿ ನಗರಸಭೆಯ ಅಧಿಕಾರಿಗಳು, ಸಿಬ್ಬಂದಿಗಳು ಇಂದಿನಿಂದಲೇ ತೊಡಗಿಕೊಳ್ಳಬೇಕು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಪುತ್ತೂರು ವಿಧಾನಸಭೆಯ ಶಾಸಕರಾಗಿ ಆಯ್ಕೆಯಾದ ಮೇಲೆ ಮೊದಲ ಬಾರಿ ನಗರಸಭೆಗೆ ಶುಕ್ರವಾರ ಭೇಟಿ ನೀಡಿ ಸಭೆಯೊಂದನ್ನು ನಡೆಸಿ ನಗರಭೆಯ ಕಾರ್ಯವೈಖರಿ ಬಗ್ಗೆ ಚರ್ಚಿಸಿದರು.
ನನ್ನ ನಿರೀಕ್ಷೆಯನ್ನು ಬಡ ಜನರ ನಿರೀಕ್ಷೆ ಎಂದು ಎಲ್ಲರೂ ತಿಳಿದುಕೊಳ್ಳಬೇಕು. ಜತೆಗೆ ತನ್ನ ಕೆಲಸದಲ್ಲಿ ಮನುಷ್ಯತ್ವವನ್ನು ಅಳವಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಜನಸಾಮಾನ್ಯರಿಗೆ ತೊಂದರೆ ಆಗಬಾರದು ಎಂದು ಸಭೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ತಿಳಿಸಿದರು.
ಯಾವುದೇ ಒಂದು ಅಭಿವೃದ್ಧಿ ಕೆಲಸವನ್ನು ಆಧಿಕಾರಿಗಳ ಸಹಾಯವಿಲ್ಲದೆ ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳ ಸಹಕಾರ ಕೋರಿದ ಅವರು, ಆಅಭಿವೃದ್ಧಿ ಹಿನ್ನಲೆಯಲ್ಲಿ ಸರಕಾರದ ಮಟ್ಟದಿಂದ ಆನುದಾನದಿಂದ ತರುವ ಕೆಲಸ ನನ್ನದ್ದು. ಆದರೆ ಅಧಿಕಾರಿಗಳ ಸಹಕಾರ ಮುಖ್ಯ ಎಂದರು.
ಮುಖ್ಯವಾಗಿ ಪುತ್ತೂರಿನ ಆಭಿವೃದ್ಧಿಗೆ ಪೂರಕವಾಗಿ ಡ್ರೈನೇಜ್ ಸಿಸ್ಟಮ್ ಅತೀ ಮುಖ್ಯವಾಗಿದೆ. ಡ್ರೈನೇಜ್ ನಿರ್ಮಾಣದ ಮೂಲಕ ಪುತ್ತೂರಿನ ಆಭಿವೃದ್ಧಿಯಾಗಬೇಕಾಗಿದೆ. ಇದಕ್ಕೆ ಬೇಕಾದ ಮಾಹಿತಿಯನ್ನು ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್ ಅವರಿಂದ ಪಡೆದುಕೊಂಡರು. ಉಳಿದಂತೆ ಈಗಾಗಲೇ ಬಡವರಿಗೆ ನೀಡುವ ಮನೆ ನಿವೇಶನದ ಕುರಿತು, ವಿಲೇವಾರಿಯಾಗದೇ ಬಾಕಿ ಉಳಿದ ಮನೆ ನಿವೇಶನ ಆರ್ಜಿಗಳ ಕುರಿತು, ಉಪ್ಪಿನಂಗಡಿಯಿಂದ ಪುತ್ತೂರಿಗೆ ಕುಡಿಯುವ ನೀರು ಸರಬರಾಜು ಕುರಿತು ಮಾಹಿತಿ ಪಡೆದುಕೊಂಡರು.
ಪ್ರಾಕೃತಿಕ ವಿಕೋಪದ ಮುನ್ನದ ತಯಾರಿ ಕುರಿತು ಶಾಸಕರು ಕೇಳಿದಾಗ, ಪೌರಾಯುಕ್ತರು ಈಗಾಗಲೇ ಪ್ರಾಕೃತಿಕ ವಿಕೋಪದಡಿ ದೊಡ್ಡ ದೊಡ್ಡ ತೋಡುಗಳನ್ನು ಹೂಳೆತ್ತುವ ಕೆಲಸಕ್ಕೆ ಚಾಲನೆ ನೀಡಲಾಗಿದೆ ಎಂದರು.
ನಗರದಲ್ಲಿರುವ ಉದ್ದಿಮೆಗಳು, ನವೀಕರಣ, ಬಾಕಿ ಇರುವ ನವೀಕರಣ, ತ್ಯಾಜ್ಯ ವಿಲೇವಾರಿ, ಸಿಬ್ಬಂದಿಗಳ ಕೊರತೆ, ಸಿಬ್ಬಂದಿಗಳ ಖಾಯಮಾತಿ ಕುರಿತು ಮಾಹಿತಿ ಪಡೆದುಕೊಂಡರು. ಒಟ್ಟಟ್ಟಾರೆಯಾಗಿ ನಗರಸಭೆ ಕಾರ್ಯವೈಖರಿ ಕುರಿತು ಸಂಪೂರ್ಣ ಮಾಹಿತಿಯನ್ನು ಪೌರಾಯುಕ್ತರು ಶಾಸಕರಲ್ಲಿ ತಿಳಿಸಿದರು.
ಸಭೆ ಆರಂಭವಾಗುತ್ತಿದ್ದಂತೆ ನಗರಸಭೆಯ ಆಧಿಕಾರಿಗಳು, ಸಿಬ್ಬಂದಿಗಳು ತಾವು ನಿರ್ವಹಿಸುವ ಕೆಲಸ, ಹೆಸರು ಪರಿಚಯ ಮಾಡಿದರು. ಈ ಸಂದರ್ಭದಲ್ಲಿ ಶಾಸಕರನ್ನು ನಗರಸಭೆ ವತಿಯಿಂದ ಶಾಸಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಲಾಯಿತು.
ಸಭೆಯಲ್ಲಿ ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.