ನವದೆಹಲಿ: ನೂತನ ಸಂಸತ್ ಕಟ್ಟಡವನ್ನು ಮೇ 28 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೇ ಉದ್ಘಾಟಿಸಬೇಕು ಎಂದು ನಿರ್ದೇಶನ ನೀಡುವಂತೆ ಕೋರಿ ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಲೋಕ ಸಭೆಯ ಸಚಿವಾಲಯವು ರಾಷ್ಟ್ರಪತಿಗಳನ್ನು ಉದ್ಘಾಟನೆಗೆ ಆಹ್ವಾನಿಸದೆ ಸಂವಿಧಾನವನ್ನು ಉಲ್ಲಂಘಿಸಿದೆ ಎಂದು ಪಿಐಎಲ್ ನಲ್ಲಿ ಹೇಳಲಾಗಿದೆ.
ನೂತನ ಸಂಸತ್ ಭವನದ ಉದ್ಘಾಟನೆ ಕುರಿತು ಮೇ 18 ರಂದು ಲೋಕಸಭೆಯ ಕಾರ್ಯದರ್ಶಿ ನೀಡಿದ ಹೇಳಿಕೆ ಮತ್ತು ರಾಷ್ಟ್ರಪತಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡದಿರುವುದು ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ವಕೀಲ ಜಯ ಸುಕಿನ್ ಸಲ್ಲಿಸಿರುವ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ. ರಾಷ್ಟ್ರಪತಿಗಳು ಭಾರತದ ಪ್ರಥಮ ಪ್ರಜೆ ಮತ್ತು ಸಂಸತ್ತಿನ ಮುಖ್ಯಸ್ಥರಾಗಿದ್ದು, ಅವರಿಂದಲೇ ನೂತನ ಕಟ್ಟಡ ಉದ್ಘಾಟಿಸುವಂತೆ ನಿರ್ದೇಶಿಸಬೇಕೆಂದು ಅವರು ಕೋರಿದ್ದಾರೆ.
ಲೋಕಸಭೆ ಸ್ಪೀಕರ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೇ 28 ರಂದು ನೂತನ ಸಂಸತ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಸುಮಾರು 20 ವಿರೋಧ ಪಕ್ಷಗಳು ನೂತನ ಸಂಸತ್ತಿನ ಕಟ್ಟಡವನ್ನು ಪ್ರಧಾನ ಮಂತ್ರಿ ಉದ್ಘಾಟಿಸುವುದನ್ನು ಖಂಡಿಸಿದ್ದು, ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸಲು ನಿರ್ಧರಿಸಿವೆ.