ಕಡಬ ಪ್ರಾಕೃತಿಕ ವಿಕೋಪ ತಡೆ ಮುಂಜಾಗ್ರತ ಸಭೆ | ವಿಪತ್ತು ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಿ, ಅಧಿಕಾರಿಗಳಿಗೆ ಎ.ಸಿ ಸೂಚನೆ

ಕಡಬ: ಮುಂಬರುವ ಮಳೆಗಾಲದಲ್ಲಿ ಉಂಟಾಗುವ ಪ್ರಾಕೃತಿಕ ವಿಕೋಪವನ್ನು ಎಲ್ಲಾ  ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಮರ್ಪಕವಾಗಿ ನಿರ್ವಹಣೆ ಮಾಡಲು ಎಲ್ಲರೂ ಸಿದದ್ರಗಬೇಕು ಎಂದು ಪುತ್ತೂರು ಸಹಯಕ ಆಯುಕ್ತ ಗಿರೀಶ್ ನಂದನ್ ಸೂಚನೆ ನೀಡಿದರು.

ಅವರು ಬುಧವಾರ ಕಡಬ ಅಂಬೇಡ್ಕರ್ ಭವನದಲ್ಲಿ  ಪ್ರಾಕೃತಿಕ ವಿಕೋಪದಡಿ ಹಾನಿಯಾಗುವ ಪ್ರಕರಣಗಳ ಬಗ್ಗೆ ಮುಂಜಾಗ್ರತ ಕ್ರಮ ವಹಿಸಲು ಕಾರ್ಯತಂತ್ರ ರೂಪಿಸುವ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಲ್ಲರೂ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಾಗ ನೆರೆ, ಭೂ ಕುಸಿತ ಮುಂತಾದ ಪ್ರಾಕೃತಿಕ ವಿಪತ್ತುಗಳನ್ನು  ಸಮರ್ಥವಾಗಿ ನಿರ್ವಹಣೆ ಮಾಡಲು ಸಾಧ್ಯ. ಪ್ರಾಕೃತಿಕ ವಿಕೋಪದ ಹೆಚ್ಚಿನ ಸಂದರ್ಭಗಳಲ್ಲಿ ಅರಣ್ಯ, ಕಂದಾಯ, ಆರೋಗ್ಯ, ಲೋಕೋಪಯೋಗಿ ಮುಂತಾದ ಇಲಾಖೆಗಳು ಜತೆಯಾಗಿ ಕೆಲಸ ಮಾಡಬೇಕಾಗುತ್ತದೆ. ತಾಲೂಕಿನ ವ್ಯಾಪ್ತಿಯಲ್ಲಿನ ಈ ಹಿಂದೆ ನೆರೆ ಬಾಧಿತ ಪ್ರದೇಶಗಳು ಹಾಗೂ ಶಿಥಿಲ ಮನೆಗಳನ್ನು ಗುರುತಿಸಿ ಅಲ್ಲಿ ನಿವಾಸಿಗಳಲ್ಲಿ ಜಾಗೃತಿ ಮೂಡಿಸಬೇಕು. ಕೃಷಿ ಹಾನಿಯ ಬಗ್ಗೆ ಪರಿಹಾರ ನೀಡುವಲ್ಲಿ ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಬೇಕು. ಸಿಡಿಲಿನ ಆಘಾತದಿಂದ ತಪ್ಪಿಸಿಕೊಳ್ಳುವ ಮಾರ್ಗೋಪಾಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ರಸ್ತೆಗಳ ಪಕ್ಕದಲ್ಲಿರುವ ಮತ್ತು ವಿದ್ಯುತ್‌ ಲೈನ್ ಮೇಲೆ ಬೀಳಬಹುದಾದ ಅಪಾಯಕಾರಿ ಮರಗಳನ್ನು  ಅರಣ್ಯ ಇಲಾಖೆಯ ಸಹಕಾರದೊಂದಿಗೆ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಎಸಿ ಸೂಚಿಸಿದರು.































 
 

ಕಡಬ ತಹಶೀಲ್ದಾರ್ ರಮೇಶ್‌ಬಾಬು ಮಾತನಾಡಿ, ಈ ಹಿಂದೆ ನೆರೆ ಬಾಧೆಯಿಂದ ತೊಂದರೆ ಎದುರಿಸಿದ ಪ್ರದೇಶಗಳಲ್ಲಿ  ಸ್ಥಳೀಯ ಗ್ರಾಮಕರಣಿಕರ ಮೂಲಕ ಸ್ಥಳೀಯ ಗ್ರಾ.ಪಂ.ಗಳ ಸಹಯೋಗದೊಂದಿಗೆ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಕಡಬ ಪಟ್ಟಣ ಪಂಚಾಯಿತಿ  ಮುಖ್ಯಾಧಿಕಾರಿ ಪಕೀರ ಮೂಲ್ಯ  ಮಾತನಾಡಿ ನಮ್ಮ ವ್ಯಾಪ್ತಿಯ ಪೇಟೆಗಳಲ್ಲಿನ ಚರಂಡಿಗಳಲ್ಲಿನ ತ್ಯಾಜ್ಯ ಸೇರಿದಂತೆ ಮಳೆನೀರು ಹರಿದುಹೋಗಲು ತಡೆಯುಂಟುಮಾಡುವ ಮಣ್ಣು, ಕಸಕಡ್ಡಿಗಳನ್ನು  ತೆಗೆದು ಶುಚಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.  ಮಳೆಗಾಲದ ಸಂದರ್ಭದಲ್ಲಿ ಗುಣಮಟ್ಟದ ವಿದ್ಯುತ್ ನೀಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು  ಕಡಬ ಮೆಸ್ಕಾಂ  ಸರ್ವೀಸ್ ಸ್ಟೇಶನ್ ಇಂಜಿನಿಯರ್ ವಸಂತಕುಮಾರ್ ಹೇಳಿದರು.. ಬೆಳಂದೂರು ಗ್ರಾ.ಪಂ. ವ್ಯಾಪ್ತಿಯಲ್ಲಿನ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಹಾಗೂ  ಸ್ಥಳೀಯ ಮೆಸ್ಕಾಂ ಅಧಿಕಾರಿಗಳ ನೆರವು ಪಡೆದುಕೊಳ್ಳುವಂತೆ ಅಲ್ಲಿನ ಪಿಡಿಒ ನಾರಾಯಣ ನಾಯ್ಕ್ ಅವರಿಗೆ  ಎಸಿ ಸೂಚಿಸಿದರು.

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಗ್ರಾಮಕರಣಿಕರು ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ದಿನದ ೨೪ ಗಂಟೆಯೂ ಫೋನ್ ಕರೆಗಳನ್ನು ಸ್ವೀಕರಿಸಿ ಪ್ರಾಕೃತಿಕ ವಿಕೋಪಗಳನ್ನು ತಡೆಯುವ ನಿಟ್ಟಿನಲ್ಲಿ  ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಕೆಲವು ಮಂದಿ ಅಧಿಕಾರಿಗಳು ಕಚೇರಿ ಸಮಯ ಮುಗಿದ ಬಳಿಕ ಫೋನ್ ಕರೆಗಳನ್ನು ಸ್ವೀಕರಿಸದಿರುವುದು ನಮ್ಮ ಗಮನಕ್ಕೆ ಬಂದಿದೆ. ತುರ್ತು ಸಂದರ್ಭಗಳಲ್ಲಿ  ಅದಿಕಾರಿಗಳು ಸ್ಪಂದಿಸದಿರುವ ಕುರಿತು ಸಾರ್ವಜನಿಕರಿಂದ ದೂರುಗಳು  ಬಂದರೆ ಅಂತಹವರ ವಿರುದ್ಧ  ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು. ಕಡಬ ತಾಲೂಕಿಗೆ ಅಗ್ನಿಶಾಮಕ ಠಾಣೆಯ ಅಗತ್ಯತೆಯ ಕುರಿತು ಸರಕಾರಕ್ಕೆ ವರದಿ ಸಲ್ಲಿಸುವುದಾಗಿ ಎಸಿ ನುಡಿದರು. 

ಸುಬ್ರಹ್ಮಣ್ಯದಲ್ಲಿ ನೆರೆ ಸಂದರ್ಭದಲ್ಲಿ ಪ್ರಾಕೃತಿಕ ವಿಕೋಪದಿಂದ ಆಗುವ ಹಾನಿಯನ್ನು ತಡೆಯುವ ಸಲುವಾಗಿ ನುರಿತ ಈಜುಗಾರರು ಸೇರಿದಂತೆ ಗೃಹರಕ್ಷಕ ಸಿಬಂದಿಯನ್ನು  ನೇಮಿಸಿಕೊಂಡು ಯಾವುದೇ ಸಂದರ್ಭದಲ್ಲಿ  ರಕ್ಷಣ ಕಾರ್ಯಕ್ಕೆ ಲಭ್ಯರಿರುವ ವ್ಯವಸ್ಥೆ ಮಾಡಲಾಗುವುದು ಎಂದು ಎಸಿ ಹೇಳಿದರು. ತಾಲೂಕು ವ್ಯಾಪ್ತಿಯ ಎಲ್ಲಾ ಇಲಾಖಾದಿಕಾರಿಗಳು ತಮ್ಮ ಸರಕಾರಿ ವಾಹನಗಳಲ್ಲಿ  ಮಳೆಗಾಲದಲ್ಲಿ ಅಗತ್ಯವಾಗಿ ಬೇಕಾಗುವ ಸಲಕರಣೆಗಳಾದ ಮರ ಕತ್ತರಿಸುವ ಸಣ್ಣ ಯಂತ್ರ, ಕತ್ತಿ, ಹಗ್ಗ, ಟಾರ್ಚ್ ಹಾಗೂ ಪ್ರಥಮ ಚಿಕಿತ್ಸೆ ಗೆ ಬೇಕಾಗುವ ಔಷಧಿಗಳನ್ನು ಇರಿಸಿಕೊಳ್ಳುವಂತೆ ಎಸಿ ಸೂಚಿಸಿದರು.

ಕಡಬ ಆರಕ್ಷಕ ಠಾಣಾ ತನಿಖಾ ಎಸ್‌ಐ ಶಶಿಧರ್, ಸುಬ್ರಹ್ಮಣ್ಯ ಎಸ್‌ಐ ಮಂಜುನಾಥ್, ಬೆಳ್ಳಾರೆ ಎಸ್‌ಐ ಸುಹಾಸ್,   ಜಿ.ಪಂ.ಎಇಇ ಭರತ್ ಬಿ.ಎಂ.,   ಲೊಕೋಪಯೋಗಿ ಇಂಜಿನಿಯರ್ ಕನಿಷ್ಕ ಚಂದ್ರ, ಕಡಬ ಪಶು ವೈದ್ಯಾಧಿಕಾರಿ ಡಾ|ಅಜಿತ್, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ರೇಖಾ, ತಾ.ಪಂ. ಉಪ ನಿರ್ದೇಶಕ ಚೆನ್ನಪ್ಪ ಗೌಡ ಕಜೆಮೂಲೆ, ಕಂದಾಯ ನಿರೀಕ್ಷಕ ಪೃಥ್ವಿರಾಜ್  ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ಸಲಹೆ ಸೂಚನೆ ನೀಡಿದರು. 

ಕಡಬ ಉಪ ತಹಶೀಲ್ದಾರ್ ಕೆ.ಟಿ.ಮನೋಹರ್ ಸ್ವಾಗತಿಸಿ, ನಿರೂಪಿಸಿದರು. ಕಡಬ ಪಟ್ಟಣ ಪಂಚಾಯಿತಿ  ಮುಖ್ಯಾಧಿಕಾರಿ ಪಕೀರ ಮೂಲ್ಯ ವಂದಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top