ಕಡಬ: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯಿತಿಯ ಗ್ರಂಥಾಲಯ ವತಿಯಿಂದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನೂಜಿಬಾಳ್ತಿಲ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ಶಿಬಿರ ಉದ್ಘಾಟಿಸಿ ಮಾತನಾಡಿ, ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಶೈಕ್ಷಣಿಕ ವರ್ಷದ ಶಾಲಾರಂಭ ಆಗಲಿದೆ. ಇದಕ್ಕೂ ಮೊದಲು ಬೇಸಿಗೆ ಶಿಬಿರಗಳನ್ನು ನಡೆಸಲಾಗುತ್ತಿರುವುದು ಮಕ್ಕಳಿಗೆ ಶಾಲಾರಂಭಕ್ಕೆ ಹೊಂದಿಕೊಳ್ಳಲು ಪೂರಕವಾಗಲಿದೆ. ಅಲ್ಲದೆ ಶಿಬಿರಗಳು ಮಕ್ಕಳಿಗೆ ವಿವಿಧ ರೀತಿಯಲ್ಲಿ ತೊಡಗಿಕೊಳ್ಳಲು ಹಾಗೂ ತಮ್ಮ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗಲಿದೆ. ಶಿಬಿರದಲ್ಲಿ ಕಲಿಸಿಕೊಡುವ ಎಲ್ಲಾ ಚಟುವಟಿಕೆಗಳು ಮಕ್ಕಳು ಚಟುವಟಿಕೆಯಿಂದ ಕೂಡಿರಲು ಹಾಗೂ ಪಠ್ಯದ ಜತೆಗೆ ಇತರ ವಿಷಯಗಳಲ್ಲಿ ತೊಡಗುವಂತೆ ಮಾಡುತ್ತದೆ ಎಂದರು.
ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ಪ್ರಭಾರ ಅಭಿವೃದ್ಧಿ ಅಧಿಕಾರಿ ಗುರುವ ಎಸ್., ಸದಸ್ಯೆ ವಿನಯ ಕುಮಾರಿ ಬಳಕ್ಕ, ಶಿಕ್ಷಕ ಗಣೇಶ್ ಎನ್ ಶುಭಹಾರೈಸಿದರು. ಗ್ರಂಥಾಲಯ ಪಾಲಕಿ ಪ್ರವೀಣಿ ಸ್ವಾಗತಿಸಿದರು.