ಪುತ್ತೂರು: ಇತ್ತೀಚೆಗೆ ಹಿಂದೂ ಕಾರ್ಯಕರ್ತರ ಮೇಲೆ ಡಿವೈಎಸ್ ಪಿ ಸಹಿತ ಪೊಲೀಸರು ನಡೆಸಿದ ದೌರ್ಜನ್ಯದಲ್ಲಿ ಕೇವಲ ಪೊಲೀಸರನ್ನು ಮಾತ್ರ ಸಸ್ಪೆಂಡ್ ಮಾಡಲಾಗಿದ್ದು, ಡಿವೈಎಸ್ ಪಿಯವರನ್ನೂ ಯಾಕೆ ಸಸ್ಪೆಂಡ್ ಮಾಡಿಲ್ಲ. ಇದನ್ನು ನ್ಯಾಯಾಲಯದ ಮೂಲಕ ಪ್ರಶ್ನಿಸಲಾಗುವುದು ಎಂದು ಅಭಿನವ ಭಾರತ ಹಾಗೂ ಅಖಿಲ ಭಾರತ ಹಿಂದು ಮಹಾಸಭಾ ತಿಳಿಸಿದೆ.
ಮಂಗಳವಾರ ಹಿಂದೂ ಮಹಾಸಭಾದ ಸಭಾಚಾಲಕ್ ಧರ್ಮೇಂದ್ರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪುತ್ತೂರಿನಲ್ಲಿ ನಡೆದ ಘಟನೆ ತಲೆತಗ್ಗಿಸುವಂತದ್ದು. ಪೊಲೀಸ್ ಇಲಾಖೆ ಕಾನೂನಿನ ದುರ್ಬಳಕೆ ಮಾಡುವುದನ್ನು ಹಿಂದು ಮಹಾಸಭಾ ಸಹಿಸುವುದಿಲ್ಲ. ದೌರ್ಜನ್ಯ ಎಸಗಿದ ಡಿವೈಎಸ್‍ಪಿ ಅವರನ್ನೂ ಸಸ್ಪೆಂಡ್ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಮೋದಿ, ಯೋಗಿ ಹೆಸರಲ್ಲಿ ಮತ ಕೇಳುವ ಬಿಜೆಪಿಯವರಿಗೆ ಮತ ಕೇಳಲು ಯಾವುದೇ ನೈತಿಕ ಹಕ್ಕಿಲ್ಲ. ಹಿಂದುತ್ವದಿಂದ ಮೇಲೆ ಬಂದ ಬಿಜೆಪಿ ಮುಖಂಡರುಗಳು ಕಾರ್ಯಕರ್ತರನ್ನು ಬಲಿಪಶು ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ಯೋಗಿ, ಮೋದಿಯವರ ವಿರುದ್ಧ ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದಾಗ ಬಿಜೆಪಿಯವರು ಯಾಕೆ ಸುಮ್ಮನಾಗಿದ್ದರು. ಇದೀಗ ಬಿಜೆಪಿ ಮುಖಂಡರ ಬ್ಯಾನರ್ ಅಳವಡಿಸಿ ಚಪ್ಪಲಿ ಹಾರ ಹಾಕಿರುವುದು ಇವರೇನು ಮೋದಿ, ಯೋಗಿಯವರಿಗಿಂತ ದೊಡ್ಡವರೇ ಎಂದು ಪ್ರಶ್ನಿಸಿದರು. ಈ ರೀತಿ ಮುಂದುವರಿದರೆ ಹಿಂದೂಗಳ ಪರಿಸ್ಥಿತಿ ಏನಾಗಬಹುದು. ಹಿಂದುತ್ವದ ಆಧಾರದ ಮೇಲೆ ಬಿಜೆಪಿಯವರು ನಮ್ಮೊಟ್ಟಿಗಿದ್ದು, ರಕ್ಷಣೆ ನೀಡಬಲ್ಲರು ಎಂಬ ಕಾರಣಕ್ಕೆ ಬಿಜೆಪಿಗೆ ಓಟು ಹಾಕಿದ್ದೇವೆ. ಆದರೆ ಬಿಜೆಪಿಗೆ ಓಟು ಹಾಕಿದರೆ ಮಾತ್ರ ಅವ ಹಿಂದುವ ಎಂದು ಪ್ರಶ್ನಿಸಿದ ಅವರು, ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿಯಿಂದ ಸೀಟು ಕೇಳಿದ್ದು ಅವರ ಹಕ್ಕು. ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಬಿಜೆಪಿಯೇತರ ಹಿಂದೂಗಳ ಜತೆ ನಾವು ಸೇರಿಕೊಂಡು ಧರ್ಮದೊಂದಿಗೆ ರಾಷ್ಟ್ರಕಟ್ಟುವ ಕೆಲಸದಲ್ಲಿ ತೊಡಗಲಿದ್ದೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಮಹಾಸಭಾದ ಪ್ರೇಮ್ ಪೊಳಲಿ, ಪೊನೀತ್ ಸುವರ್ಣ ಉಪಸ್ಥಿತರಿದ್ದರು.