ಉಡುಪಿ : ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಯು.ಆರ್. ಸಭಾಪತಿ (71) ಮೇ 21ರಂದು ಬೆಳಿಗ್ಗೆ ನಿಧನರಾದರು.
1987ರಲ್ಲಿ ದ. ಕ. ಜಿಲ್ಲಾ ಪರಿಷತ್ ನ ಸದಸ್ಯರಾಗಿದ್ದ ಸಭಾಪತಿ ಅವರು 1994ರಲ್ಲಿ ಎಸ್. ಬಂಗಾರಪ್ಪ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಉಡುಪಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು. 1999ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾದರು. 2004ರ ಚುನಾವಣೆಯಲ್ಲಿ ಬಿಜೆಪಿಯ ರಘುಪತಿ ಭಟ್ ವಿರುದ್ಧ ಪರಾಭವಗೊಂಡಿದ್ದರು.
ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಬಳಿಕ ಪಕ್ಷದ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. 1989ರಿಂದ ಕಾಂಗ್ರೆಸ್ ಪಕ್ಷದಲ್ಲಿ ಉಡುಪಿ ಕ್ಷೇತ್ರದಿಂದ ಟಿಕೆಟ್ ದೊರೆಯದ ಕಾರಣ ಬಂಡಾಯ ಅಭ್ಯರ್ಥಿಯಾಗಿ ಮನೋರಮಾ ಮಧ್ವರಾಜ್ ವಿರುದ್ಧ ಸ್ಪರ್ಧಿಸಿ ಅಲ್ಪ ಮತಗಳ ಅಂತರದಲ್ಲಿ ಸೋಲು ಕಂಡಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.