ಪುತ್ತೂರು: ನಿರೀಕ್ಷೆಯಂತೆಯೇ ಪುತ್ತಿಲ ಪರಿವಾರ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ. ಸೇವಾ ಸಮರ್ಪಣೆ ಸಮಾರಂಭ ಹಲವು ಕುತೂಹಲಗಳಿಗೆ ನಾಂದಿ ಹಾಡಿತ್ತು. ಆ ಎಲ್ಲಾ ಕುತೂಹಲಗಳಿಗೆ ಸಮಾರಂಭ ಉತ್ತರ ನೀಡಿದೆ.
ದರ್ಬೆ ವೃತ್ತದಿಂದ ಪುತ್ತೂರು ಪೇಟೆಯಾಗಿ ಸಾಗಿ ಬಂದ ಕಾಲ್ನಡಿಗೆ ಜಾಥಾ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಒಂದು ಪ್ರದಕ್ಷಿಣೆ ಬಂದು, ರಥಬೀದಿಯಲ್ಲಿ ಹಾಕಿದ್ದ ವೇದಿಕೆಗೆ ಆಗಮಿಸಿತು. ವೇದಿಕೆಗೆ ಹತ್ತಿದ ಅರುಣ್ ಕುಮಾರ್ ಪುತ್ತಿಲ ಅವರು ಸಭೆಗೆ ಸಾಷ್ಟಾಂಗ ನಮಸ್ಕರಿಸಿದರು. ನಂತರ ನಡೆದ ಸಭೆಯಲ್ಲಿ ಪುತ್ತಿಲ ಪರಿವಾರ ಲೋಗೊ ಅನಾವರಣ ಮಾಡಲಾಯಿತು.
ದೇಶಕ್ಕೆ ಸ್ಪಷ್ಟ ಸಂದೇಶ ನೀಡಿದ್ದೇವೆ: ಪುತ್ತಿಲ
ಕಾರ್ಯಕರ್ತರಿಗೆ, ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತಾ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ಅವರು, ಕಾರ್ಯಕರ್ತರ ಮನಸ್ಥಿತಿಗೆ ವಿರುದ್ಧವಾಗಿ ಮಾಡುವ ಕೆಲಸವನ್ನು ಜನರು ಒಪ್ಪುವುದಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಈ ಚುನಾವಣೆಯ ಮೂಲಕ ದೇಶಕ್ಕೆ ನೀಡಿದ್ದೇವೆ. ಅನೇಕ ವಾಮಮಾರ್ಗದ ಮೂಲಕ, ಅಧರ್ಮದ ಕೆಲಸಗಳ ಮೂಲಕ, ಸೋಲಿಸಲು ಬೇಕಾದ ಎಲ್ಲಾ ಕೆಲಸಗಳ ಸೋಲಿಸುವ ಪ್ರಯತ್ನ ಮಾಡಿದರು. ಇವುಗಳನ್ನು ನೋಡಿ ಅನೇಕ ಮಂದಿ ಕಣ್ಣೀರು ಹಾಕಿದರು. ಆದರೆ ಚುನಾವಣೆಯಲ್ಲಿ ಸೋತರೂ, ಸ್ಪಷ್ಟ ಸಂದೇಶವನ್ನು ನೀಡಲು ಸಾಧ್ಯವಾಗಿದೆ ಎಂದರು.


ಚುನಾವಣೆಯ ಹಿಂದಿನ ದಿನದವರೆಗೆ ನಾನು ಬದುಕುತ್ತೇನೆ ಎಂಬ ಧೈರ್ಯವೇ ಇರಲಿಲ್ಲ. ಆದರೆ ನಿಮ್ಮೆಲ್ಲರ ಆಶೀರ್ವಾದ, ಮಹಾಲಿಂಗೇಶ್ವರನ ಆಶೀರ್ವಾದದಿಂದ ಉಳಿದುಕೊಂಡಿದ್ದೇನೆ. ನಿಮ್ಮ ಈ ಪ್ರೀತಿ, ವಿಶ್ವಾಸ ಶಾಶ್ವತವಾಗಿರಲಿ. ನಾನಿರುವುದು ಧರ್ಮದ ಕಾರ್ಯಕ್ಕೆ, ಹಿಂದುತ್ವಕ್ಕಾಗಿ ಮಾತ್ರ. ಈ ಪುಣ್ಯದ ಮಣ್ಣಿನಲ್ಲಿ ಧರ್ಮದ ಕೆಲಸವನ್ನು ಮಾಡುತ್ತೇನೆ ಎಂದರು.
ಅಧಿಕಾರಕ್ಕಾಗಿ ರಾಜಕೀಯ ದಾರಿ ಹಿಡಿದ ಎಂಬ ಆರೋಪ ಮಾಡಿದರು. ದೇವಸ್ಥಾನದಲ್ಲಿ ಹಣ ದುರುಪಯೋಗ ಮಾಡಿದ ಎಂದು ಅಪಚಾರ ಮಾಡಿದರು. ಅರುಣ್ ಉಗ್ರಗಾಮಿ ಎಂದರು. ನಾನಿಟ್ಟಿರುವ ಪ್ರತಿ ಕಣ್ಣೀರಿನ ಹನಿಗೂ ಮಹಾಲಿಂಗೇಶ್ವರ ಉತ್ತರ ಕೊಡುತ್ತಾನೆ. ಕೊರಗಜ್ಜ, ಪಣೋಲಿಬೈಲಿನ ಕಲ್ಲುರ್ಟಿ, ಧರ್ಮಸ್ಥಳದ ಅಣ್ಣಪ್ಪ ಸೇರಿದಂತೆ ಎಲ್ಲಾ ದೈವಗಳು, ದೇವರು ಅವರನ್ನು ಸರಿ ದಾರಿಯಲ್ಲಿ ನಡೆಸಲಿ ಎಂದು ಆಶಿಸಿದರು.
ಆರ್.ಎಸ್.ಎಸ್.ಗೆ ಅಪಮಾನ ಆಗಬಾರದು: ಶ್ರೀಕೃಷ್ಣ ಉಪಾಧ್ಯಾಯ
ಶ್ರೀಕೃಷ್ಣ ಉಪಾಧ್ಯಾಯ ಮಾತನಾಡಿ, ಸೇವಾ ಸಮರ್ಪಣೆ ಎನ್ನುವ ಹೆಸರಿನಲ್ಲಿ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಕೃತಜ್ಞತೆ ಹೇಳುವ ಕಾರ್ಯಕ್ರಮ ಆಯೋಜಿಸಿದ್ದೇವೆ. ಅನೇಕರಿಗೆ ಪ್ರಶ್ನೆ ಬಂದಿರಬಹುದು ಇದು ಸೇವೆ ಆಗುವುದು ಹೇಗೆ ಎಂದು. ನರೇಂದ್ರ ಮೋದಿಯವರು ಸಿಎಂ ಆದ ಬಳಿಕ ಪಿಎಂ ಆಗಬೇಕೆಂಬ ಧ್ವನಿಯನ್ನು ನೀಡಿದ್ದೇ ಕಾರ್ಯಕರ್ತರದ್ದು. ಬಹುಶಃ ಪಕ್ಷವೂ ಈ ಬಗ್ಗೆ ಚಿಂತಿಸಿರಲಿಕ್ಕಿಲ್ಲ. ಅಂದರೆ ಯಾವ ಕೆಲಸಕ್ಕಾಗಿ ನಮ್ಮ ಜೀವನವನ್ನೇ ಸಮರ್ಪಿಸಿರುತ್ತೇವೋ ಅದನ್ನು ಸೇವೆ ಎನ್ನುತ್ತೇವೆ. ನರೇಂದ್ರ ಮೋದಿಯವರು ಇಂದು ರಾಜಕೀಯದಲ್ಲಿದ್ದರೂ, ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ನೀಡಿದ್ದಾರೆ. ಅದೇ ರೀತಿ ನಮ್ಮ ಈ ಕೆಲಸ ಚುನಾವಣೆಗಾಗಿ ಮಾತ್ರವಲ್ಲ, ನಮ್ಮ ಜೀವನದ ಕೊನೆವರೆಗೂ ಇಂತಹ ಸೇವಾ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರಬೇಕು ಎಂದರು.
ಪುತ್ತಿಲ ಪರಿವಾರ ಎಂಬ ಸುಂದರ ಸಂಘಟನೆ ರಚನೆಗೊಂಡಿದೆ. ಇದು ಯಾರ ಮೇಲೂ ದ್ವೇಷ ಸಾಧಿಸಲಿಕ್ಕಲ್ಲ. ಭಾರೀ ಭಾರೀ ವಿರೋಧಿಸಿದವರದ್ದೂ ಪಾದ ಮುಟ್ಟಿ ನಮಸ್ಕರಿಸಿದವರು ನಾವು. ಆದ್ದರಿಂದ ಇದು ಸೇವಾ ಮನೋಭಾವನೆಗಾಗಿಯೇ ಹುಟ್ಟಿಕೊಂಡ ಸಂಘಟನೆ. ಬರೀ ಚುನಾವಣೆಯಷ್ಟೇ ಅಲ್ಲ. ಚುನಾವಣೆಯ ಜೊತೆಗೆ ಸೇವಾ ಕಾರ್ಯಕ್ರಮವನ್ನು ನಿತ್ಯನಿರಂತರವಾಗಿ ಹಮ್ಮಿಕೊಳ್ಳಬೇಕು ಎನ್ನುವ ಆಶಯ ಈ ಸಂಘಟನೆಯದ್ದು ಎಂದರು.
ಆರ್.ಎಸ್.ಎಸ್. ಎಂಬ ಅತ್ಯದ್ಭುತ ಸಂಘಟನೆ ಜನ್ಮ ತಾಳಿ 100 ವರ್ಷದ ಸಂಭ್ರಮದಲ್ಲಿದ್ದೇವೆ. ಇಂತಹ ಸುಸಂದರ್ಭದಲ್ಲಿ ಪುತ್ತಿಲ ಪರಿವಾರ ಎಂಬ ಸಂಘಟನೆಯೂ ಜನ್ಮ ತಾಳಿದೆ. ಯಾವ ಕಾಲಕ್ಕೂ ಆರ್.ಎಸ್.ಎಸ್.ಗೆ ಅಪಮಾನ ಆಗಬಾರದು. ಹಲವು ಇತಿಹಾಸಗಳಿಗೆ ಮುನ್ನುಡಿ ಬರೆದಿರುವ ಪುತ್ತೂರಿನಲ್ಲಿ ಪುತ್ತಿಲ ಪರಿವಾರವೂ ಹೊಸ ಇತಿಹಾಸ ನಿರ್ಮಿಸಲಿ ಎಂದು ಹಾರೈಸಿದರು.
ಭ್ರಷ್ಟಾಚಾರ, ಅನಿಷ್ಟ, ಅಸಮಾನತೆ ತೊಡೆದು ಹಾಕಲಿ: ಡಾ. ಪುತ್ತೂರಾಯ
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಸುರೇಶ್ ಪುತ್ತೂರಾಯ, ಕೇವಲ ಚುನಾವಣೆಗಾಗಿ ಅಲ್ಲ, ಸದಾ ನಿಮ್ಮೊಂದಿಗೆ ನಾವಿದ್ದೇವೆ ಎಂದು ತೋರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕಾರ್ಯಕರ್ತರ ಒತ್ತಾಸೆಯಾಗಿ ಚುನಾವಣೆಗೆ ಪುತ್ತಿಲ ಸ್ಪರ್ಧಿಸಿದ್ದರು. 62 ಸಾವಿರ ಮತಗಳು ಯಾರ ವಿರುದ್ಧವೂ ಬಿದ್ದ ಮತಗಳಲ್ಲ. ಅದು ಅರುಣಣ್ಣನಿಗಾಗಿ ಬಿದ್ದ ಮತಗಳು ಎಂದರು.
ಭ್ರಷ್ಟಾಚಾರ, ಅನಿಷ್ಠ, ಅಸಮಾನತೆಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಪುತ್ತಿಲ ಪರಿವಾರ ಕೆಲಸ ಮಾಡಲಿ ಎಂದು ಆಶಿಸಿದ ಡಾ. ಸುರೇಶ್ ಪುತ್ತೂರಾಯ, ಬಲಿಷ್ಠ ಹಿಂದೂ ಸಮಾಜಕ್ಕೆ ಈ ಸಭೆ ನಾಂದಿ ಹಾಡಲಿದೆ. ಹಿಂದೂ ಸಮಾಜಕ್ಕೆ ಸಂಕಷ್ಟ ಬಂದಾಗ ಎದುರಿಸಿ ನಿಲ್ಲಲು ಸಿದ್ಧರಿದ್ದೇವೆ. ಧಾರ್ಮಿಕ, ಸಾಮಾಜಿಕ ಕೆಲಸಗಳಿಗೆ ಈ ಪಡೆ ಇನ್ನಷ್ಟು ಬಲಿಷ್ಠಗೊಂಡು ಕೆಲಸ ಮಾಡಲಿದೆ ಎಂದರು.
ಪ್ರಸನ್ನ ಕುಮಾರ್ ಮಾರ್ತಾ ಅಧ್ಯಕ್ಷತೆ ವಹಿಸಿದ್ದರು. ವಸಂತ ಲಕ್ಷ್ಮೀ, ರಾಜಶೇಖರ್, ಉಮೇಶ್ ಕೊಡಿಬೈಲು, ಡಾ. ಗಣೇಶ್ ಪ್ರಸಾದ್ ಮುದ್ರಾಜೆ ಉಪಸ್ಥಿತರಿದ್ದರು.
ಪುತ್ತಿಲ ಪರಿವಾರಕ್ಕೆ ಅಧ್ಯಕ್ಷ, ಕಾರ್ಯದರ್ಶಿಯ ಆಯ್ಕೆ:
ಪುತ್ತಿಲ ಪರಿವಾರ ಸಂಘಟನೆಯ ಅಧ್ಯಕ್ಷರಾಗಿ ಪ್ರಸನ್ನ ಕುಮಾರ್ ಮಾರ್ತಾ, ಕಾರ್ಯದರ್ಶಿಯಾಗಿ ಉಮೇಶ್ ಗೌಡ ಅವರು ಆಯ್ಕೆಯಾಗಿದ್ದಾರೆ ಎಂದು ಅರುಣ್ ಕುಮಾರ್ ಪುತ್ತಿಲ ಘೋಷಿಸಿದರು. ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಸಾಕಾರಗೊಳ್ಳಲಿ ಎಂದು ಹಾರೈಸಿದ ಅವರು, ನಿಮ್ಮೆಲ್ಲರ ಆಶೀರ್ವಾದವೂ ನಮ್ಮ ಮೇಲಿರಲಿ ಎಂದು ಕೇಳಿಕೊಂಡರು.