ಹೊಸದಿಲ್ಲಿ: ಬೀಡಿ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅದರ ಮೇಲೆ ಇನ್ನಷ್ಟು ತೆರಿಗೆ ಹಾಕಬೇಕೆಂದು ಶಿಫಾರಸು ಮಾಡಲಾಗಿದೆ. ತಂಬಾಕು ಉತ್ಪನ್ನಗಳಿಂದ ಹರಡುವ ಕ್ಯಾನ್ಸರ್ ಬಗ್ಗೆ ಅಧ್ಯಯನ ನಡೆಸಿರುವ ಜೋಧ್‌ಪುರದ ಏಮ್ಸ್‌ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಮತ್ತು ಇಂಟರ್‌ನ್ಯಾಷನಲ್ ಯೂನಿಯನ್ ಅಗೈನ್‌ಸ್ಟ್ ಟ್ಯುಬರ್‌ಕ್ಯುಲೋಸಿಸ್ ಆ್ಯಂಡ್ ಲಂಗ್ ಡಿಸೀಸ್ ಜಂಟಿಯಾಗಿ ನಡೆಸಿ ಸಲ್ಲಿಸಿದ ಅಧ್ಯಯನ ವರದಿ ಈ ಶಿಫಾರಸು ಮಾಡಿದೆ.
ಸಿಗರೇಟ್ ಸೇರಿದಂತೆ ಇತರ ತಂಬಾಕು ಉತ್ಪನ್ನಗಳ ಮೇಲೆ ಹೇರಿರುವ ತೆರಿಗೆ ಮಾದರಿಯಲ್ಲೇ ಬೀಡಿ ಮೇಲೂ ಮೇಲೆ ತೆರಿಗೆ ಹೆಚ್ಚಳ ಮಾಡಿ, ನಿಯಂತ್ರಕ ಕ್ರಮಗಳನ್ನು ಬಲಪಡಿಸಬೇಕು. ಆಗ ಅವುಗಳ ಬಳಕೆ ಕಡಿಮೆಯಾಗುತ್ತದೆ ಮತ್ತು ಮರಣ ಪ್ರಮಾಣವೂ ತಗ್ಗುತ್ತದೆ ಎಂದು ಈ ಅಧ್ಯಯನ ವರದಿ ಹೇಳಿದೆ.
ಬೀಡಿ ಬಳಕೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆ, ಪರಿಸರ ಹಾನಿ ಹಾಗೂ ಆರ್ಥಿಕ ಹೊರೆಯನ್ನು ಗಣನೆಗೆ ತೆಗೆದುಕೊಂಡು ಬೀಡಿ ಉದ್ಯಮಕ್ಕೆ ನೀಡಿರುವ ಗುಡಿ ಕೈಗಾರಿಕೆ ಸ್ಥಾನಮಾನ ರದ್ದು ಮಾಡಿ ತೆರಿಗೆ ಹೆಚ್ಚಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ.
ತೆರಿಗೆ ಹೆಚ್ಚಳವಾದರೆ ಬೀಡಿ ಬೆಲೆ ಸಹಜವಾಗಿಯೇ ಏರಿಕೆ ಕಾಣುತ್ತದೆ. ಇದರಿಂದ ಅದರ ಬೇಡಿಕೆಯೂ ತಗ್ಗುತ್ತದೆ. ಜತೆಗೆ ಬೀಡಿ ಉತ್ಪನ್ನಗಳ ಮೇಲಿನ ನಿಯಂತ್ರಣವನ್ನು ಹೆಚ್ಚಿಸಬೇಕು ಎಂದೂ ಶಿಫಾರಸು ಮಾಡಲಾಗಿದೆ.
ಕರಾವಳಿ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಬೀಡಿ ಉದ್ಯಮ ಸಾವಿರಾರು ಕುಟುಂಬಗಳಿಗೆ ಜೀವನಾಧಾರವಾಗಿದೆ. ಮನೆಯಲ್ಲಿ ಕಟ್ಟಿ ಕೊಡುವ ಬೀಡಿ ಉದ್ಯಮದಿಂದ ಅನೇಕ ಮಹಿಳೆಯರು ಸ್ವ ಉದ್ಯೋಗ ಕಂಡುಕೊಂಡಿದ್ದಾರೆ. ಹೀಗಾಗಿ ಸರಕಾರ ಇದಕ್ಕೆ ಗುಡಿ ಕೈಗಾರಿಕೆಯ ಸ್ಥಾನ ನೀಡಿದೆ.