ಪುತ್ತೂರು: ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರು ಬೇರೆಯಲ್ಲ. ಆದ್ದರಿಂದ ಕಾರ್ಯಕರ್ತರ ಭಾವನೆಯನ್ನು ಕೇಂದ್ರಕ್ಕೆ ತಲುಪಿಸುವ ಕೆಲಸ ಮಾಡುತ್ತೇನೆ. ನೊಂದ ಎಲ್ಲರಿಗೂ ಪಕ್ಷದಿಂದಲೇ ಪರಿಹಾರ ನೀಡಲು ಪ್ರಯತ್ನಿಸುತ್ತೇನೆ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಪೊಲೀಸ್ ದೌರ್ಜನ್ಯಕ್ಕೊಳಗಾದ ಯುವಕರನ್ನು ಭೇಟಿಯಾಗಿ ಧೈರ್ಯ ತುಂಬಿ, ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.
ಹೊರಗೊಂದು ಒಳಗೊಂದು ಮಾತನಾಡುವ ಸ್ವಭಾವ ನನ್ನದಲ್ಲ. ಯಾವತ್ತೂ ನೇರವಾಗಿಯೇ ಮಾತನಾಡುವವ. ಪ್ರಜಾಪ್ರಭುತ್ವದಲ್ಲಿ ಟೀಕೆ – ಟಿಪ್ಪಣಿಗೆ ಅವಕಾಶವಿದೆ. ಬ್ಯಾನರ್ ಹಾಕಿದ್ದಾರೆ ಎಂದಾಕ್ಷಣ ಅವರು ತಾಲಿಬಾನಿಗಳಲ್ಲ, ದೇಶದ್ರೋಹಿಗಳಲ್ಲ. ಬ್ಯಾನರ್ ಹಾಕಿದ ಯುವಕರಿಗೆ ಯದ್ವಾ – ತದ್ವಾ ಹಲ್ಲೆ ನಡೆಸಿದ ಡಿವೈಎಸ್ಪಿಯನ್ನು ಅಮಾನತು ಮಾಡಬೇಕು ಹಾಗೂ ಸೂಕ್ತ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ನಾಳೆಯಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಹಿಂದೆ ಗೋರಕ್ಷಕರನ್ನು ಹತ್ಯೆ ಮಾಡಿರುವಂತಹ, ಹಿಂದೂಗಳ ಮಾರಣ ಹೋಮ ಮಾಡಿದಂತಹ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬಂದಿರುವುದು ದುರ್ದೈವ. ಇಂತಹ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಅನಾಥಪ್ರಜ್ಞೆ, ಭಯ ಕಾಡುತ್ತದೆ. ಹಾಗೆಂದು ಯಾವುದೇ ಧರ್ಮದ ವಿರುದ್ಧ ಹೋರಾಟಕ್ಕೆ ಹೋಗಲ್ಲ. ನಮ್ಮ ಕಡೆಯಿಂದ ಯಾವುದೇ ರೀತಿಯಲ್ಲಿ ತಪ್ಪಾಗದಂತೆ ನಾವು ನೋಡಿಕೊಳ್ಳುತ್ತೇವೆ. ಆದರೆ ಸರ್ಕಾರ ತಪ್ಪು ಹೆಜ್ಜೆ ಇಡುವಾಗ ಅದನ್ನು ಸಹಿಸಿಕೊಂಡು ಸುಮ್ಮನೆ ಕೂರುವುದಿಲ್ಲ ಎಂದರು.
6 ಬಾರಿ ನಾನು ಗೆದ್ದು ಬಂದಿದ್ದೇನೆ. ಒಳಗಿನ ಸತ್ಯ ನಮಗೆ ತಿಳಿದಿದೆ. ಆದ್ದರಿಂದ ಕಾರ್ಯಕರ್ತರ ನೋವನ್ನು ಎಲ್ಲಿಗೆ ತಲುಪಿಸಬೇಕೋ ಅಲ್ಲಿಗೆ ತಲುಪಿಸುತ್ತೇವೆ. ಕಾರ್ಯಕರ್ತರಿಗೆ ಯಾವುದೇ ರೀತಿಯ ಭಯ ಬೇಡ. ಆಗಿರುವ ತಪ್ಪನ್ನು ಪಕ್ಷದಿಂದಲೇ ಸರಿಪಡಿಸುವ ಕೆಲಸ ಮಾಡುತ್ತೇವೆ. ಎಲ್ಲಾ ಕಡೆಯಿಂದಲೂ ಆತ್ಮಾವಲೋಕ ಮಾಡುವ ಕೆಲಸ ಆಗಬೇಕಿದೆ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.
ನಾನೇ ಮುಖ್ಯಮಂತ್ರಿಯಾದರೂ ದೌರ್ಜನ್ಯ ನಡೆಸುವ ಕೆಲಸವನ್ನು ಮಾಡಬಾರದು. ಪೊಲೀಸ್ ಇಲಾಖೆಯನ್ನು ಹದ್ದುಬಸ್ತಿನಲ್ಲಿಡುವ ಕೆಲಸವನ್ನು ಸರಕಾರ ಮಾಡಬೇಕು. ಇದೇ ರೀತಿ ಆದರೆ ನಾವು ಸುಮ್ಮನೆ ಕೂರುವುದಿಲ್ಲ ಎಂದರು.
ಪುತ್ತಿಲ ಮನವಿ:
ಇದೇ ಸಂದರ್ಭ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ಅವರು, ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗಿದ ಡಿವೈಎಸ್ಪಿ ಅಧಿಕಾರಿ ವಿರುದ್ಧದ ತನಿಖೆಗೆ ಡಿವೈಎಸ್ಪಿಯನ್ನೇ ನೇಮಿಸಲಾಗಿದೆ. ಇದು ಸರಿಯಲ್ಲ. ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ತನಿಖೆ ಆಗಬೇಕು. ಜೊತೆಗೆ ಸಂತ್ರಸ್ತ ಕಾರ್ಯಕರ್ತರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.